ತಿರುವನಂತಪುರ: ಕೇರಳದಲ್ಲಿ ಇನ್ನೈದು ದಿನ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿ ಮೃಂತ್ಯಜಯ್ ತಿಳಿಸಿದ್ದಾರೆ. ಕೇರಳದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಮತ್ತೆ ಆರಂಭವಾಗಿದೆ.
ಹವಾಮಾನ ಇಲಾಖೆ ಕೇರಳದ 14 ಜಿಲ್ಲೆಗಳಲ್ಲಿ ಘೋಷಿಸಿದ್ದ ‘ರೆಡ್ ಅಲರ್ಟ್’ ಹಿಂದಕ್ಕೆ ಪಡೆದುಕೊಂಡಿದ್ದು, ಕೇರಳಿಗರು ಕೊಂಚ ನಿರಾಳರಾಗುವಂತೆ ಮಾಡಿದೆ. ಕಳೆದ ಎರಡು ವಾರಗಳಿಂದ ಕೇರಳದಲ್ಲಿ ಭಾರೀ ಮಳೆಯಾಗಿದ್ದು, ಮಳೆಯ ಪ್ರಮಾಣ ಕಡಿಮೆ ಆಗಿದೆ. ಆದ್ರೆ ಮುಂದಿನ ಐದು ದಿನಗಳಲ್ಲಿ ಸಾಧಾರಣ ಮಳೆಯಾಗಲಿದೆ. ನದಿಗಳಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಸಾಮಾನ್ಯವಾಗಿ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳನ್ನು ಹೊರತು ಪಡಿಸಿ ಎಲ್ಲ ಕಡೆಯೂ ಸಾಧಾರಣ ಮಳೆಯಾಗಲಿದೆ.
ಆರೆಂಜ್ ಅಲರ್ಟ್ (ಅಪಾಯ ಸಂಭವಿಸುವ ಸಾಧ್ಯತೆಗಳಿದ್ದು ತಯಾರಾಗಿರಿ) ನ್ನು ರಾಜ್ಯದಿಂದ ಹಿಂದಕ್ಕೆ ಪಡೆಯಲಾಗಿದೆ. ಇಡುಕ್ಕಿ, ಕೋಜಿಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಇನ್ನು ಯೆಲ್ಲೋ ಅಲರ್ಟ್ (ಪ್ರವಾಹ ಪರಿಸ್ಥಿತಿ ನಿಮಗೆ ತಿಳಿದಿರಲಿ) ಘೋಷಿಸಲಾಗಿದೆ.
ಕೇರಳದ ರಕ್ಷಣಾ ಕಾರ್ಯಚರಣೆ ಇಂದು ಅಂತಿಮ ಹಂತವನ್ನು ತಲುಪಿದ್ದು, 5,500 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಪರಿಹಾರ ಕೇಂದ್ರಗಳಲ್ಲಿ 7 ಲಕ್ಷಕ್ಕೂ ಅಧಿಕ ಜನರು ಆಶ್ರಯ ಪಡೆದಿದ್ದು, ಎಲ್ಲ ನಿರಾಶ್ರಿತರಿಗೆ ಮೂಲಭೂತ ಸೌಲಭ್ಯ ಮತ್ತು ಆಹಾರ ನೀಡುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಾಂಗ್ರೆಸ್ ನ ಎಲ್ಲ ಸಂಸದರು ಮತ್ತು ಶಾಸಕರು ತಮ್ಮ ಒಂದು ತಿಂಗಳ ಸಂಬಳವನ್ನು ಕೇರಳ ಪರಿಹಾರ ನಿಧಿಗೆ ನೀಡಿದ್ದಾರೆ. ಇತ್ತ ಶಿವಸೇನೆ ಪಕ್ಷದ ಎಲ್ಲ ಸಂಸದರು ಮತ್ತು ಶಾಸಕರು ಸಹ ತಮ್ಮ ಒಂದು ತಿಂಗಳ ಸಂಬಳವನ್ನು ಕೇರಳ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ. ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ 500 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಮೃತ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತ್ರಿಶೂರ್, ತಿರುವನಂತಪುರಂ, ಕ್ಯಾಲಿಕಟ್, ಕಣ್ಣೂರು, ಪಾಲ್ಗಾಟ್, ಕೊಟ್ಟಾಯಂಗಳಿಗೆ ಒಟ್ಟು 12 ರಿಂದ 13 ಬಸ್ಸುಗಳು ಭಾನುವಾರ ರಾತ್ರಿ ಸಂಚಾರ ಆರಂಭಿಸಿದೆ. ಮಡಿಕೇರಿ ಹಾಗೂ ಕುಶಾಲನಗರಕ್ಕೂ ಬಸ್ಸುಗಳನ್ನು ಬಿಡಲಾಗಿದೆ. ಮಂಗಳೂರು ಕಡೆಗೆ ಚಾರ್ಮಾಡಿ ಘಾಟ್ ಕಡೆಯಿಂದ ಸಾಮಾನ್ಯ ಬಸ್ಸುಗಳನ್ನು ಮಾತ್ರ ಬಿಡಲಾಗುತ್ತಿದೆ. ಆದರೆ, ಕಾಸರಗೋಡಿಗೆ ಯಾವುದೇ ಬಸ್ಸುಗಳನ್ನು ರಸ್ತೆಗಿಳಿಸಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv