ಕೇರಳದಲ್ಲಿ ಪ್ರಧಾನಿ ವೈಮಾನಿಕ ಸಮೀಕ್ಷೆ – 500 ಕೋಟಿ ಪರಿಹಾರ ಘೋಷಣೆ

Public TV
2 Min Read
modi kerala

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ರಾಜ್ಯಕ್ಕೆ 500 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ.

ಪ್ರವಾಹದಲ್ಲಿ ಮೃತ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಪಿ. ಸತಾಶಿವಂ ಹಾಗು ಕೇಂದ್ರ ಪ್ರವಾಸ ಮಂತ್ರಿ ಕೆ.ಜೆ.ಆಲ್ಫೋನ್ಸ್ ರಿಂದ ನೆರೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡರು.

ಶುಕ್ರವಾರ ಸಂಜೆಯೇ ತಿರುವನಂತಪುರಕ್ಕೆ ಬಂದಿಳಿದಿದ್ದ ಪ್ರಧಾನಿಗಳನ್ನು ಸಿಎಂ ಸ್ವಾಗತಿಸಿಕೊಂಡಿದ್ದರು. ವೈಮಾನಿಕ ಸಮೀಕ್ಷೆಗೂ ಮುನ್ನ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಪ್ರಧಾನಿ ಸಭೆ ನಡೆಸಿದ್ದರು. ಇಂದು ಕೊಚ್ಚಿನ್ ನಿಂದ ವೈಮಾನಿಕ ಸಮೀಕ್ಷೆ ನಡೆಸಿದರು.

ಅತಿವೃಷ್ಟಿಯಿಂದಾಗಿ ಅಂದಾಜು 19,512 ಕೋಟಿ ರೂ.ನಷ್ಟವಾಗಿದ್ದು, ಪ್ರಧಾನ ಮಂತ್ರಿಗಳು ಕೂಡಲೇ 2 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿಕೊಳ್ಳಲಾಗಿತ್ತು. ಪ್ರಧಾನಿಗಳು ರಾಜ್ಯಕ್ಕೆ 500 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರ ರಾಜ್ಯಕ್ಕೆ 100 ಕೋಟಿ ರೂ. ನೀಡಿತ್ತು. ರಾಜ್ಯದ ನೆರವಿಗೆ ಧಾವಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದೆ. ಪರಿಹಾರ ನಿಧಿಗೆ ಹಣ ವರ್ಗಾವಣೆಗೊಳಿಸುವ ಎಲ್ಲ ಬ್ಯಾಂಕಿನ ಶುಲ್ಕಗಳನ್ನು ಕಡಿತಗೊಳಿಸಲಾಗಿದೆ ಎಂದು ಎಸ್‍ಬಿಐ ತಿಳಿಸಿದೆ.

ಶನಿವಾರ ಕಾಸರಗೋಡು ಎರ್ನಾಕುಲಂ ಮತ್ತು ಇಡುಕ್ಕಿ ಒಳಗೊಂಡಂತೆ ಇತರ 13 ಜಿಲ್ಲೆಗಳಿಗೂ ಎಚ್ಚರಿಕೆಯನ್ನು ಸೂಚಿಸಲಾಗಿದೆ. ಶುಕ್ರವಾರ ಬೆಳಗ್ಗೆ 5 ಘಟಕದ ರಾಷ್ಟ್ರೀಯ ವಿಪತ್ತು ಪಡೆ ತಿರುವನಂತಪುರಂ ತಲುಪಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದೆ. ಇಂದು ಕೂಡ 35 ಸದಸ್ಯರ ತಂಡ ತಲುಪುವ ನೀರಿಕ್ಷೆ ಇದೆ. ಇದೀಗ ಐಸಿಜಿ ಪಡೆಯನ್ನು ವಂಡಿಪೆರಿಯರ್ ನಿಂದ ಮಂಜುಮಾಲಾ ಹಳ್ಳಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ 16 ಮಂದಿಯನ್ನು ರಕ್ಷಿಸಲಾಗಿದೆ. ಹಾಗೂ ಅವರಿಗೆ ಸೇವಿಸಲು ಆಹಾರ ಪದಾರ್ಥಗಳನ್ನು ನೀಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *