ಮಲಪ್ಪುರಂ: ತನ್ನ ಜೊತೆ ಅಮ್ಮನ ಪರ ಮಾತನಾಡುತ್ತಾಳೆ ಎಂದು ಸಿಟ್ಟುಗೊಂಡ ಪಾಪಿ ತಂದೆಯೊಬ್ಬ 18 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಲೆಗೈದ ಆಘಾತಕಾರಿ ಘಟನೆಯೊಂದು ನಡೆದಿದೆ.
ಈ ಘಟನೆ ಪೆರುವಲ್ಲುರ್ ಸಮೀಪದ ತೆನ್ಹಿಪ್ಪಲಮ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಇಂದು ಆರೋಪಿ ತಂದೆ 46 ವರ್ಷದ ಶಶಿ ಪೊಲೀಸ್ ಠಾಣೆಗೆ ಶಾರಣಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?: ಅಕ್ರಮ ಸಂಬಂಧದ ಬಗ್ಗೆ ತಾಯಿ ಮತ್ತು ತಂದೆ ಮಧ್ಯೆ ಮಾತಿಗೆ ಮಾತು ಬೆಳೆಯುತ್ತಿದ್ದ ಸಂದರ್ಭದಲ್ಲಿ ಮಗಳು ಶಾಲು ಇವರಿಬ್ಬರ ಮಧ್ಯೆ ಬಂದು ತಾಯಿ ಪರ ವಹಿಸಿ ಮಾತನಾಡಿದ್ದಾಳೆ. ಇದರಿಂದ ಸಿಟ್ಟುಗೊಂಡ ತಂದೆ ಬುಧವಾರ ಮಧ್ಯರಾತ್ರಿ ಕಿರುಚಾಡದಂತೆ ಬಾತ್ ಟವಲ್ ನನ್ನು ಆಕೆಯ ಮುಖಕ್ಕೆ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಇಡೀ ರಾತ್ರಿ ಶವದ ಜೊತೆ ಕಳೆದಿದ್ದಾನೆ. ಬೆಳಗ್ಗೆಯಾಗುತ್ತಿದ್ದಂತೆಯೇ ಆರೋಪಿ ತಂದೆ ನೇರವಾಗಿ ತೆನ್ಹಿಪ್ಪಲಮ್ ಪೊಲೀಸ್ ಠಾನೆಗೆ ಬಂದು ಶರಣಾಗಿದ್ದಾನೆ.
ಮೃತ ಶಾಲು ತಾಯಿ ಶೈಲಜಾ ಪೆರಿಂಥಾಲ್ಮಣ್ಣಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿ ತಂದೆ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಸದ್ಯ ಬಂಧಿತ ಶಶಿಯನ್ನು ಇಂದು ಪರಪ್ಪನಂಗಡಿಯಲ್ಲಿರೋ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.
ಬಂಧಿತ ಆರೋಪಿಗೆ ಆತನ ಪತ್ನಿಗೆ ಅಕ್ರಮ ಸಂಬಂಧವಿರೋ ಶಂಕೆ ವ್ಯಕ್ತವಾಗಿದ್ದು, ಪ್ರತೀ ಬಾರಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಗಳು ಅಮ್ಮನ ಪರ ವಹಿಸಿ ಮಾತನಾಡುತ್ತಿದ್ದಳು. ಇದರಿಂದ ಆತನಿಗೆ ಮಗಳು ಶಾಲು ಮೇಲೆಯೂ ಸಂಶಯ ವ್ಯಕ್ತವಾಗಿ ಈ ಕೃತ್ಯ ಎಸಗಿದ್ದಾನೆ ಅಂತ ತಿರುರಂಗಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ತನಿಖಾಧಿಕಾರಿ ಇ. ಸುನಿಲ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಳೆದ ವರ್ಷವಷ್ಟೇ ಪೆರುವಲ್ಲರ್ ನ ಪ್ರೌಢಶಾಲೆಯಲ್ಲಿ ತನ್ನ ಓದು ಮುಗಿಸಿದ್ದ ಶಾಲು ಸದ್ಯ ಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.