ತಿರುವನಂತಪುರಂ: ಯಜ್ಞ ಯಾಗಕ್ಕಾಗಿ ಕೇರಳಕ್ಕೆ ಹೋಗಿದ್ದ ಸಿಎಂ ಯಡಿಯೂರಪ್ಪಗೆ ಪ್ರತಿಭಟನೆಯ ಬಿಸಿ ತಟ್ಟಿದೆ.
ತಿರುವನಂತಪುರಂನ ಹೋಟೆಲ್ ನಿಂದ ಹೊರಟ ಬಿಎಸ್‍ವೈ ಬೆಂಗಾವಲು ವಾಹನಕ್ಕೆ ಅಡ್ಡ ಬಂದ ಪ್ರತಿಭಟನಾಕಾರರು ಕಪ್ಪು ಪಟ್ಟಿ ಹಿಡಿದ ಗೊ ಬ್ಯಾಕ್ ಬಿಎಸ್‍ವೈ ಎಂದು ಕೂಗಿದ್ದಾರೆ. ಕೇರಳ ಯೂತ್ ಕಾಂಗ್ರೆಸ್ ಸದಸ್ಯರು, ಬಿಎಸ್‍ವೈ ಹೊರಡುವ ಸಮಯಕ್ಕೆ ಬೆಂಗಾವಲು ವಾಹನಕ್ಕೆ ಅಡ್ಡ ಬರಲು ಯತ್ನಿಸಿ, ಕಪ್ಪು ಬಾವುಟ ಪ್ರದರ್ಶನ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.
ಇಷ್ಟಕ್ಕೂ ಇವರು ಗೊ ಬ್ಯಾಕ್ ಬಿಎಸ್‍ವೈ ಎನ್ನಲು ಕಾರಣ, ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಮತ್ತು ಕೇರಳ ಪತ್ರಕರ್ತರ ಅರೆಸ್ಟ್ ಖಂಡಿಸಿ ಮಾಡಿದ್ದು ಎಂದು ತಿಳಿದು ಬಂದಿದೆ. ಎರಡು ದಿನಗಳ ಕಾಲ ಅನಂತಪದ್ಮನಾಭನ ಸನ್ನಿಧಿಯಲ್ಲಿ ವಿಶೇಷ ಹೋಮ ಹವನಕ್ಕಾಗಿ ಹೋಗಿದ್ದ ಬಿಎಸ್‍ವೈಗೆ ಗೊ ಬ್ಯಾಕ್ ಎಂದು ಪ್ರತಿಭಟನೆ ನಡೆಸಿ, ಮುಜುಗರ ಉಂಟು ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಬೆಂಗಾವಲು ವಾಹನಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಎಲ್ಲಾ ಯೂತ್ ಕಾಂಗ್ರೆಸ್ ಸದಸ್ಯರನ್ನು ಅರೆಸ್ಟ್ ಮಾಡಲಾಗಿದೆ.