Connect with us

Karnataka

ಕಂಕಣ ಸೂರ್ಯಗ್ರಹಣದ ವಿಸ್ಮಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಘಳಿಗೆ!

Published

on

ಕಾಸರಗೋಡು: ಈ ದಶಕದ ಕೊನೆಯ ಕಂಕಣ ಗ್ರಹಣ ಜಿಲ್ಲೆಯ ಪಾಲಿಗೆ ಅದ್ಭುತ ದೃಶ್ಯ ವಿಸ್ಮಯ ನೀಡಿತ್ತು. ಭಾರತದಲ್ಲೇ ಕಾಸರಗೋಡು ಜಿಲ್ಲೆಯ ಚೆರುವತ್ತೂರಿನಲ್ಲಿ ಮೊದಲ ಬಾರಿಗೆ ಸೂರ್ಯಗ್ರಹಣ ಗೋಚರವಾಯಿತು. ದೇಶದಲ್ಲೇ ಮೊದಲ ಬಾರಿಗೆ ಗ್ರಹಣ ಚೆರುವತ್ತೂರಿನಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಡಳಿತ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿತ್ತು. ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಗ್ರಹಣ ವೀಕ್ಷಿಸಿದರು.

ಚೆರುವತ್ತೂರಿನಲ್ಲಿ ಗ್ರಹಣ ವೀಕ್ಷಣೆಗೆ ತೆರಳಿದ್ದ ಕಾಸರಗೋಡು ನಗರದ ಫೋಟೋಸ್ಟಾರ್ ಸಂಜು ಅವರು ತೆಗೆದ ಫೋಟೋಗಳು ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ವೈರಲ್ ಆಗುತ್ತಿದೆ. ಬೆಳಗ್ಗೆ 8.04ರಿಂದ 9.40ರವರೆಗಿನ ಅವಧಿಯ ಫೋಟೋ ಕೊಲಾಜ್ ಮಾಡಿ ಸಂಜು ಅವರು ತಮ್ಮ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ರಿಂಗ್ ಆಫ್ ಫೈರ್ – ಸೋಲಾರ್ ಎಕ್ಲಿಪ್ಸ್ 2019’ ಹೆಸರಿನಲ್ಲಿ ಹಾಕಿರೋ ಫೋಟೋ ಎಲ್ಲರ ಮನಸೆಳೆಯುತ್ತಿದೆ.

ಗ್ರಹಣ ಶುರುವಾದಾಗಿನಿಂದ ಗ್ರಹಣ ಮೋಕ್ಷದವರೆಗಿನ ಒಟ್ಟು 16 ಫೋಟೋಗಳ ಕೊಲಾಜನ್ನು ಸಂಜು ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ಇಂದು ಕಾಣಿಸಿದ ಗ್ರಹಣ ಹೇಗಿತ್ತು ಎನ್ನುವುದನ್ನು ಸ್ಪಷ್ಟವಾಗಿ ಜನರಿಗೆ ಅರ್ಥ ಮಾಡಿಸುತ್ತಿದೆ. ಅಲ್ಲದೆ ಬಾನಂಗಳದ ವಿಸ್ಮಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಸಂಜು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಚೆರುವತ್ತೂರಿನಲ್ಲಿ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಎಂ.ರಾಜಗೋಪಾಲನ್, ಕಾಸರಗೋಡು ಜಿಲ್ಲಾಧಿಕಾರಿ ಡಿ.ಸಜಿತ್ ಬಾಬು ಕೂಡಾ ಗ್ರಹಣ ವೀಕ್ಷಣೆಗೆ ಆಗಮಿಸಿದ್ದರು.

ಚೆರುವತ್ತೂರಿನ ಭೌಗೋಳಿಕ ವಿಶೇಷತೆ ಹಿನ್ನೆಲೆಯಲ್ಲಿ ಸ್ಪೇಸ್ ಇಂಡಿಯಾ ಸಂಸ್ಥೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ವಿಶೇಷ ಕನ್ನಡಕಗಳ ಮೂಲಕವೂ ಜನರು ಗ್ರಹಣ ವೀಕ್ಷಿಸಿದರು. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿದ್ದರು.

Click to comment

Leave a Reply

Your email address will not be published. Required fields are marked *