ತಿರುವನಂತಪುರಂ: ಲೋಕಸಭಾ ಚುನಾವಣೆ ಹಿನ್ನೆಲೆ ಬ್ಯಾನರ್ ಗಳು, ಕಟೌಟ್‍ಗಳು, ವಿಭಿನ್ನ ಪಕ್ಷಗಳ ರಾಶಿ ರಾಶಿ ಬಾವುಟಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿರುತ್ತದೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮಿಂದಾದ ಕಸವನ್ನು ತಾವೇ ಸ್ವಚ್ಛ ಮಾಡುವ ಮೂಲಕ ಕೇರಳ ಅಭ್ಯರ್ಥಿಗಳು ಈಗ ಮಾದರಿಯಾಗಿದ್ದಾರೆ.
ಬೃಹತ್ ರೋಡ್ ಶೋ, ಖ್ಯಾತ ರಾಜಕಾರಣಿಗಳ ಭೇಟಿ, ಪಕ್ಷದ ಪ್ರಚಾರಕ್ಕಾಗಿ ಬ್ಯಾನರ್, ಕಟೌಟ್ ಅಂತ ಕ್ಷೇತ್ರದ ಮೂಲೆ ಮೂಲೆಗೂ ಕಸದ ರಾಶಿಯೇ ತುಂಬಿ ಹೋಗಿರುತ್ತದೆ. ಅಲ್ಲದೆ ಚುನಾವಣೆ ಬಳಿಕ ಮತದಾನ ಮುಗಿಯುತ್ತಿದ್ದಂತೆ ಕಸದ ರಾಶಿಯ ಗತಿ ಕೇಳುವವರೇ ಇರುವುದಿಲ್ಲ. ಎಲ್ಲೆಂದರಲ್ಲಿ ಭಾರಿ ಪ್ರಮಾಣದಲ್ಲಿ ಕಸ ತುಂಬಿಕೊಂಡಿರುತ್ತದೆ. ಆದರೆ ಕೇರಳದಲ್ಲಿ ಮತದಾನ ನಡೆದ ನಂತರ ಸ್ಪರ್ಧೆಗೆ ನಿಂತಿದ್ದ ಅಭ್ಯರ್ಥಿಗಳೇ ನಗರವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.
Advertisement
https://www.facebook.com/kummanam.rajasekharan/posts/1962362957206815
Advertisement
ಚುನಾವಣೆಗೆ ಬಳಸಿದ ವಸ್ತುಗಳನ್ನು ಪುನಃ ಬಳಕೆ ಮಾಡಲು, ಸಾರ್ವಜನಿಕರ ಬಳಕೆಗೆ ಉಪಯೋಗವಾಗುವಂತೆ ಅದನ್ನು ಪರಿಷ್ಕರಿಸಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಗೊಳಿಸಲು ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ಜೊತೆಗೆ ಸ್ವತಃ ತಾವೇ ಮುಂದೆ ಬಂದು ರಸ್ತೆಗಳಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ತೆರವು ಗೊಳಿಸಲು ಪುರಸಭೆ ಕಾರ್ಮಿಕರ ಜೊತೆ ಕೈಜೋಡಿಸಿದ್ದಾರೆ.
Advertisement
ಈ ಬಗ್ಗೆ ಮಾಜಿ ಮಿಜೋರಾಮ್ ಗವರ್ನರ್ ಮತ್ತು ಬಿಜೆಪಿ ಅಭ್ಯರ್ಥಿ ಕುಮ್ಮನಮ್ ರಾಜಶೇಖರನ್ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಸ್ವಚ್ಛತಾ ಅಭಿಯಾನದಡಿ ಚುನಾವಣೆಗೆ ಬಳಸಿದ್ದ ಸುಮಾರು 1 ಲಕ್ಷ ಶಾಲುಗಳು ವಾಪಸ್ ಬಂದಿದೆ. ಈ ಶಾಲುಗಳನ್ನು ಎಸೆಯುವ ಬದಲು ಅವುಗಳನ್ನು ಸಂಗ್ರಹಿಸಿದ್ದೇವೆ. ಅವುಗಳನ್ನು ಸಾರ್ವಜನಿಕರಿಗೆ ಸಹಾಯವಾಗುವಂತೆ ಪುನರ್ ಬಳಕೆಗೆ ಉಪಯೋಗಿಸುತ್ತೇವೆ. ಈ ಶಾಲುಗಳನ್ನು ಬ್ಯಾಗ್, ದಿಂಬು ಹೀಗೆ ಇತ್ಯಾದಿ ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತನೆ ಮಾಡಬಹುದು. ಪ್ರಕೃತಿ ಸ್ನೇಹಿ ವಸ್ತುಗಳ ಬಳಕೆಗೆ ಉತ್ತೇಜನ ನೀಡುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದಾಗಿದೆ ನಮ್ಮ ಗುರಿ ಎಂದು ತಿಳಿಸಿದ್ದಾರೆ.
Advertisement
https://www.facebook.com/HibiEden/posts/10155940051967260
ಎರ್ನಾಕುಲಮ್‍ನ ಕಾಂಗ್ರೆಸ್ ಅಭ್ಯರ್ಥಿ ಹಿಬಿ ಈಡನ್ ಕೂಡ ಈ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ಜತೆ ಕ್ಷೇತ್ರದಲ್ಲಿ ಪ್ರಚಾರದ ಸಂದರ್ಭ ಬಿದ್ದಿದ್ದ ಕಸಗಳನ್ನು ತೆರವುಗೊಳಿಸಿ, ಬೀದಿಗಳನ್ನು ಸ್ವಚ್ಛ ಮಾಡಿದ್ದಾರೆ. ಚುನಾವಣೆ ಸಂದರ್ಭ ಉಪಯೋಗಿಸಿದ್ದ ಎಲ್ಲಾ ರೀತಿಯ ಪಕ್ಷದ ವಸ್ತುಗಳನ್ನು ತೆರವುಗೊಳಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಫೇಸ್‍ಬುಕ್ ಮೂಲಕ ಹಿಬಿ ಸೂಚಿಸಿದ್ದಾರೆ. ಹಾಗೆಯೇ ಸಿಪಿಎಂ ಅಭ್ಯರ್ಥಿ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಪಿ ರಾಜೀವ್ ಅವರು ಮುಂದಿನ ಎರಡು ದಿನಗಳಲ್ಲಿ ಚುನಾವಣೆ ಪ್ರಚಾರಕ್ಕೆ ಬಳಸಿದ ಎಲ್ಲ ವಸ್ತುಗಳನ್ನು ಕ್ಷೇತ್ರದಿಂದ ತೆರವುಗೊಳಿಸಿ ಸ್ವಚ್ಛಗೊಳಿಸುವುದಾಗಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
https://www.facebook.com/prajeev.cpm/posts/2437006436311441
ಕೇಂದ್ರ ಸಚಿವ ಮತ್ತು ಬಿಜೆಪಿಯ ಎರ್ನಾಕುಲಂ ಅಭ್ಯರ್ಥಿ ಆಲ್ಫಾನ್ಸ್ ಕಣ್ಣಂತಾನಂ ಕ್ಷೇತ್ರದ ಸಾರ್ವಜನಿಕ ಜಾಗಗಳನ್ನು ಸಂರಕ್ಷಿಸಲು ಒತ್ತಾಯಿಸಿದ್ದು, ಪಕ್ಷಕ್ಕೆ ಸಂಬಂಧಪಟ್ಟ ಎಲ್ಲಾ ಪೋಸ್ಟರ್ ಮತ್ತು ಚಿಹ್ನೆಗಳನ್ನು ತಮ್ಮ ಪಕ್ಷದ ಕಾರ್ಯಕರ್ತರು ತೆರವುಗೊಳಿಸಿದ್ದಾರೆ. ಅಲ್ಲದೆ ಪಕ್ಷದ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಬರೆದಿದ್ದ ಗೋಡೆಬರಹ ಹಾಗೂ ರೇಖಾಚಿತ್ರಗಳನ್ನು ಅಳಿಸಲು ಅವುಗಳ ಮೇಲೆ ಪೇಂಟ್ ಮಾಡಲಾಗಿದೆ. “ನಮ್ಮ ಸಂದೇಶವನ್ನು ನಿಮಗೆ ಮತ್ತು ನಿಮ್ಮ ನೆರೆಹೊರೆಯವರ ಜೊತೆ ಹಂಚಿಕೊಳ್ಳಲು ಅವಕಾಶ ನೀಡಿದಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.