ಮುಷರಫ್‌ಗೆ ಶ್ರದ್ಧಾಂಜಲಿ ಸಲ್ಲಿಸಲು ಮುಂದಾದ ಕೇರಳ ಬ್ಯಾಂಕ್‌ ನೌಕರರ ಸಂಘ!

Public TV
2 Min Read
Pervez Musharraf

ತಿರುವನಂತಪುರಂ: ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯಾದ (Bank Of India) ಕೇರಳದ ನೌಕರರ ಸಂಘಟನೆ ಪಾಕಿಸ್ತಾನ (Pakistan) ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಕಾರ್ಗಿಲ್‌ ವಿಜಯದ (Kargil Vijay Diwas) 25ನೇ ವರ್ಷದ ಮರು ದಿನ ಜುಲೈ 27 ರಂದು ಬ್ಯಾಂಕ್‌ ಆಫ್‌ ಇಂಡಿಯಾದ ಕಮ್ಯೂನಿಸ್ಟ್‌ ಬೆಂಬಲಿತ ಬ್ಯಾಂಕ್ ಆಫ್ ಇಂಡಿಯಾ ನೌಕರರ ಸಂಘ ಅಲಪ್ಪುಳದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ನಟರು, ಗಾಯಕರು, ನೃತ್ಯಗಾರರು, ಕ್ರೀಡಾಪಟುಗಳು, ಕಾರ್ಯಕರ್ತರು ಮತ್ತು ಇತರರನ್ನು ಒಳಗೊಂಡಂತೆ ಸನ್ಮಾನಿಸಲ್ಪಡುವ ವ್ಯಕ್ತಿಗಳ ಹೆಸರನ್ನು ಸಂಘ ಬಿಡುಗಡೆ ಮಾಡಿತ್ತು. ಮಲಯಾಳಂನಲ್ಲಿ ಆಹ್ವಾನ ಪತ್ರಿಕೆಯ ಶ್ರದ್ಧಾಂಜಲಿ ಸಲ್ಲಿಸುವ ಗಣ್ಯರ ಪಟ್ಟಿಯಲ್ಲಿ ಪರ್ವೇಜ್‌ ಮುಷರಫ್‌ ಹೆಸರನ್ನು ಸೇರಿಸಿತ್ತು.  ಇದನ್ನೂ ಓದಿ: ಕಾಶ್ಮೀರದಲ್ಲಿ ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!

ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅಲಪ್ಪುಳದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಯೂನಿಯನ್ ಕಾನ್ಫರೆನ್ಸ್ ಹಾಲ್‌ನ ಸ್ಥಳದ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ಕೊನೆ ಕ್ಷಣದಲ್ಲಿ ಮುಷರಫ್‌ ಹೆಸರನ್ನು ತೆಗೆಯಲಾಯಿತು. ಮುದ್ರಣ ದೋಷದಿಂದ ಮುಷರಫ್‌ ಹೆಸರು ಪ್ರಕಟವಾಗಿದೆ ಎಂದು ಸಂಘಟಕರು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಕಾರ್ಯಕ್ರಮವನ್ನು ಸಂಸದ ಕೆಸಿ ವೇಣುಗೋಪಾಲ್‌ ಉದ್ಘಾಟಿಸಬೇಕಿತ್ತು. ಆದರೆ ವೇಣುಗೋಪಾಲ್‌ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಈಗ ಭಾರೀ ಚರ್ಚೆ ಆಗುತ್ತಿದ್ದು ಯಾವ ಕಾರಣಕ್ಕೆ ಮುಷರಫ್‌ ಹೆಸರು ಆಹ್ವಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ? ನೌಕರರ ಸಂಘದ ನಾಯಕರನ್ನು ವಿಚಾರಣೆಗೆ ಒಳಪಡಿಸಬೇಕೆಂಬ ಆಗ್ರಹವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

 

Share This Article