ಸಿಎಎ ರದ್ದುಗೊಳಿಸಿ : ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಸಿಎಂ ಪಿಣರಾಯಿ ವಿಜಯನ್

Public TV
1 Min Read
Pinarayi Vijayan

ತಿರುವನಂತಪುರಂ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರದ್ದುಗೊಳಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ.

ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಎಸ್‍ಸಿ ಮತ್ತು ಎಸ್‍ಟಿಗಳಿಗೆ ಮೀಸಲಾತಿಯನ್ನು ಮತ್ತೊಂದು ದಶಕಗಳವರೆಗೆ ವಿಸ್ತರಿಸುವುದನ್ನು ಅಂಗೀಕರಿಸಲು ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಇದೇ ವೇಳೆ ಸಿಎಎ ವಿಚಾರದಲ್ಲಿ ಸಾರ್ವಜನಿಕರಲ್ಲಿ ವ್ಯಾಪಕವಾದ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಸಿಎಎ ವಿರುದ್ಧದ ನಿರ್ಣಯವನ್ನು ಸಹ ಕೈಗೊಳ್ಳಲಾಗಿದೆ.

ಸಿಎಎ ವಿರುದ್ಧ ನಿರ್ಣಯವನ್ನು ಮಂಡಿಸುವಾಗ ಸಿಎಂ ಪಿಣರಾಯಿ ವಿಜಯನ್ ಸಿಎಎ ದೇಶದ ‘ಜಾತ್ಯಾತೀತ’ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ ಮತ್ತು ಪೌರತ್ವ ನೀಡುವಲ್ಲಿ ಧರ್ಮ ಆಧಾರಿತ ತಾರತಮ್ಯ ಸರಿಯಲ್ಲ ಈ ಕಾಯ್ದೆಯು ಸಂವಿಧಾನದ ಮೂಲ ಮೌಲ್ಯಗಳು ಮತ್ತು ತತ್ವಗಳಿಗೆ ವಿರುದ್ಧವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಜನರಲ್ಲಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಸಿಎಎಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ ಅವರು ಸಂವಿಧಾನದ ಜಾತ್ಯಾತೀತ ದೃಷ್ಟಿಕೋನವನ್ನು ಎತ್ತಿಹಿಡಿಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಮಾಡಿದರು. ಅಲ್ಲದೇ ಕೇರಳದಲ್ಲಿ ಯಾವುದೇ ಬಂಧನ ಕೇಂದ್ರಗಳು ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಿಎಎ ವಿರುದ್ಧ ನಿರ್ಣಯ ಮಂಡಿಸುವ ಸಂಬಂಧ ಬಿಜೆಪಿ ಏಕೈಕ ಸದಸ್ಯ ಓ ರಾಜಗೋಪಾಲ್ ವಿರೋಧ ವ್ಯಕ್ತಪಡಿಸಿದರು. ಸಂಸತ್ತಿನ ಉಭಯ ಸದನಗಳಲ್ಲಿ ಸಿಎಎ ಕಾಯ್ದೆಯನ್ನು ಅಂಗೀಕರಿಸಿದ್ದರಿಂದ ಇದು ‘ಕಾನೂನುಬಾಹಿರ’ ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಷಯದ ಬಗ್ಗೆ ಚರ್ಚಿಸಲು ಸಿಎಂ ಪಿಣರಾಯಿ ವಿಜಯನ್ ಡಿಸೆಂಬರ್ 29 ರಂದು ಕರೆದ ಸರ್ವಪಕ್ಷ ಸಭೆಯಲ್ಲಿ ವಿಶೇಷ ಅಧಿವೇಶನ ನಡೆಸಿ ಸಿಎಎ ವಿರುದ್ಧ ನಿರ್ಣಯ ಮಂಡಿಸುವಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಎಡ ಸರ್ಕಾರಕ್ಕೆ ಒತ್ತಾಯಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *