ಸಹದೇವ್ ಕೆಲವಡಿ ನಿರ್ದೇಶನದ `ಕೆಂಡ’ (Kenda) ಚಿತ್ರವೀಗ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಗಂಟುಮೂಟೆ ಖ್ಯಾತಿಯ ರೂಪಾ ರಾವ್ (Roopa Rao) ನಿರ್ಮಾಣ ಮಾಡಿರುವ ಈ ಸಿನಿಮಾ ಭಿನ್ನ ಜಾಡಿನ ಕಥಾನಕವನ್ನು ಒಳಗೊಂಡಿದೆ. ಈ ಹೊತ್ತಿನಲ್ಲಿ ಕೆಂಡದ ಬಗೆಗಿನ ಮತ್ತೊಂದು ಖುಷಿಯ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಕೆಂಡ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್ (Phalke Film Festival)ಗೆ ಆಯ್ಕೆಯಾಗಿದೆ.
ದೆಹಲಿಯಲ್ಲಿ ನಡೆಯಲಿರುವ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್-24ಕ್ಕೆ ಕೆಂಡ ಪ್ರವೇಶ ಪಡೆದಿದೆ. ಕೇವಲ ಚಿತ್ರತಂಡಕ್ಕೆ ಮಾತ್ರವಲ್ಲದೇ, ಕನ್ನಡ ಚಿತ್ರರಂಗದ ಪಾಲಿಗೂ ಖುಷಿಯ ಸಂಗತಿ. ಈ ಫಿಲಂ ಫೆಸ್ಟಿವಲ್ ಪ್ರತಿಷ್ಠೆಯನ್ನು ಕಾಯ್ದುಕೊಂಡು ಬಂದಿದೆ. ಇದಕ್ಕೆ ಆಯ್ಕೆಯಾಗಬೇಕೆಂದು ಅದೆಷ್ಟೋ ಸಿನಿಮಾ ಮಂದಿಯ ಕನಸಾಗಿರುತ್ತದೆ. ಹಾಗಂತ, ಅದೇನೂ ಸಲೀಸಿನ ಸಂಗತಿಯಲ್ಲ. ಅಲ್ಲಿ ನಾನಾ ಪರೀಕ್ಷೆಗಳಿಗೆ ಎದುರಾಗಿ ಜೈ ಎನಿಸಿಕೊಂಡರೆ ಮಾತ್ರವೇ ಸಿನಿಮಾವೊಂದು ಆಯ್ಕೆಯಾಗಲು ಸಾಧ್ಯ. ಎಲ್ಲ ರೀತಿಯಿಂದಲೂ ಗುಣಮಟ್ಟ ಕಾಯ್ದುಕೊಂಡ ಸಿನಿಮಾಗಳಿಗೆ ಮಾತ್ರವೇ ಆ ಅವಕಾಶ ಸಿಗುತ್ತದೆ. ಅಂಥಾದ್ದನ್ನೆಲ್ಲ ದಾಟಿಕೊಂಡು ಆಯ್ಕೆಯಾಗಿದೆಯೆಂದರೆ, ಕೆಂಡದ ಅಸಲೀ ಕಸುವಿನ ಬಗ್ಗೆ ಹೆಚ್ಚೇನೂ ಬಿಡಿಸಿ ಹೇಳುವಂತಿಲ್ಲ.
ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆಯಲ್ಲಿಯೇ ಸಹದೇವ್ ಕೆಲವಡಿ ಗೆಲುವಿನ ಮೆಟ್ಟಿಲೊಂದನ್ನು ಹತ್ತಿದ್ದಾರೆ. ಅಂದಹಾಗೆ, ಈ ಚಿತ್ರ ಇದೇ ಜೂನ್ ತಿಂಗಳಿನಲ್ಲಿ ತೆರೆಗಾಣಲಿದೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಕೆಂಡವನ್ನು ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ.
ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀರ್ಶ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ಮುಂತಾದವರ ತಾರಾಗಣವಿದೆ.