-5,00,000 ಮೆಟ್ರಿಕ್ ಟನ್ ದಾಟಿದ ಸರಕು ಸಾಗಣೆ
ಬೆಂಗಳೂರು/ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) 2024-25ರ ಹಣಕಾಸು ವರ್ಷದಲ್ಲಿ ಹೊಸ ದಾಖಲೆ ಬರೆದಿದ್ದು, ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಮೈಲಿಗಲ್ಲು ಸೃಷ್ಟಿಸಿದೆ. ಈ ವಿಮಾನ ನಿಲ್ದಾಣದ ಮೂಲಕ, 2024ರಲ್ಲಿ 41 ದಶಲಕ್ಷ ಪ್ರಯಾಣಿಕರು ಸಂಚರಿಸಿದ್ದು, 5,00,000 ಮೆಟ್ರಿಕ್ ಟನ್ ತೂಕದ ಸರಕುಗಳನ್ನು ಸಾಗಿಸಲಾಗಿದೆ.
2023ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 37.53 ದಶಲಕ್ಷ ಪ್ರಯಾಣಿಕರು ಸಂಚರಿಸಿದ್ದರು. 2024ರಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.11.6ರಷ್ಟು ಏರಿಕೆಯಾಗಿದ್ದು, 41.88 ದಶಲಕ್ಷ ತಲುಪಿದೆ. ಶೇ.11.6ರಷ್ಟು ಹೆಚ್ಚಳವಾಗಿದೆ. ದೇಶೀಯ ಪ್ರಯಾಣಿಕರ ಸಂಖ್ಯೆಯು ಶೇ.10ರಷ್ಟು ಬೆಳವಣಿಗೆಯಾಗಿ 36.05 ದಶಲಕ್ಷ ತಲುಪಿದ್ದರೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯು ಶೇ.25ರಷ್ಟು ಹೆಚ್ಚಳವಾಗಿ, 5.83 ದಶಲಕ್ಷಕ್ಕೆ ಏರಿಕೆಯಾಗಿದೆ.ಇದನ್ನೂ ಓದಿ: ಕೊನೆಯಲ್ಲಿ ರಿಂಕು, ರಾಣಾ ಹೋರಾಟ ವ್ಯರ್ಥ – ಲಕ್ನೋಗೆ 4 ರನ್ ರೋಚಕ ಜಯ, ಕೆಕೆಆರ್‌ಗೆ ವಿರೋಚಿತ ಸೋಲು
ಈ ನಿಲ್ದಾಣದ ಮೂಲಕ ಪ್ರಯಾಣಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲು, ಇಂಡಿಗೋ ವಿಮಾನಯಾನ ಸಂಸ್ಥೆಯು ತನ್ನ ಜಾಗತಿಕ ಜಾಲವನ್ನು ವಿಸ್ತರಿಸಿರುವುದು ಪ್ರಮುಖ ಕಾರಣವಾಗಿದೆ. ಜೊತೆಗೆ, ಬೆಂಗಳೂರಿನಿಂದ ಲಂಡನ್ ಹೀಥ್ರೂಗೆ ದೈನಂದಿನ ಹೆಚ್ಚುವರಿ ವಿಮಾನ ಹಾರಾಟ, ಕ್ಯಾಥೆ ಪೆಸಿಫಿಕ್, ಕೆಎಲ್‌ಎಂ, ಜಪಾನ್ ಏರ್‌ಲೈನ್ಸ್, ಕ್ವಾಂಟಾಸ್ ಸೇರಿದಂತೆ ಹಲವು ವಿದೇಶಿ ವಿಮಾನಯಾನ ಸಂಸ್ಥೆಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಒದಗಿಸುವ ವಿಮಾನ ಸೇವೆಯನ್ನು ಇನ್ನಷ್ಟು ಹೆಚ್ಚಿಸಿರುವುದು ಸಹ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣ ಕಳೆದ ನಾಲ್ಕು ತಿಂಗಳುಗಳಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿ ಸ್ಥಾನ ಪಡೆದುಕೊಂಡಿದೆ. 76 ದೇಶೀಯ ಮತ್ತು 33 ಅಂತಾರಾಷ್ಟ್ರೀಯ ತಾಣಗಳಿಗೆ ಬೆಂಗಳೂರಿನಿAದ ತಡೆರಹಿತ ವಿಮಾನ ಸೇವೆ ಲಭ್ಯವಿದ್ದು, ಇದೇ ವರ್ಷದ ಮೇ ತಿಂಗಳಿನಿಂದ ವಿಯೆಟ್ನಾಂನ ಹನೋಯಿ ನಗರಕ್ಕೆ ಆರಂಭವಾಗಲಿರುವ ವಿಮಾನ ಸೇವೆಯು 34ನೇ ಅಂತಾರಾಷ್ಟ್ರೀಯ ತಾಣವಾಗಿ ಹೊರಹೊಮ್ಮಲಿದೆ.
5,00,000 ಮೆಟ್ರಿಕ್ ಟನ್ ದಾಟಿದ ಸರಕು ಸಾಗಣೆ:
ಸರಕು ಸಾಗಣೆಯಲ್ಲಿಯೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಾಖಲೆ ನಿರ್ಮಿಸಿದೆ. ಇದೇ ಮೊದಲ ಬಾರಿಗೆ, 5,00,000 ಮೆಟ್ರಿಕ್ ಟನ್‌ಗಿಂತ ಹೆಚ್ಚು ಸರಕು ಸಾಗಣೆ ಮಾಡುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. 2024-25ರ ಆರ್ಥಿಕ ವರ್ಷದಲ್ಲಿ ಒಟ್ಟು 502,480 ಮೆಟ್ರಿಕ್ ಟನ್ ಸರಕನ್ನು ಸಾಗಣೆ ಮಾಡಲಾಗಿದ್ದು, ವರ್ಷದಿಂದ ವರ್ಷಕ್ಕೆ ಗಮನಾರ್ಹವಾದ ಶೇ.14ರಷ್ಟು ಬೆಳವಣಿಗೆ ದಾಖಲಾಗುತ್ತಿದೆ.ಇದನ್ನೂ ಓದಿ: ‘ಡೆವಿಲ್’ ಸಿನಿಮಾ ತುಂಬಾ ಡಿಫರೆಂಟ್ ಆಗಿದೆ: ಅಪ್‌ಡೇಟ್ ಕೊಟ್ಟ ವಿನಯ್
ಈ ಪೈಕಿ, ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲಿ ಶೇ.21ರಷ್ಟು ಏರಿಕೆಯಾಗಿದ್ದು, ಒಟ್ಟು 321,418 ಮೆಟ್ರಿಕ್ ಟನ್ ಸರಕು ಸಾಗಿಸಲಾಗಿದೆ. ದೇಶೀಯ ಸರಕು ಸಾಗಣೆಯಲ್ಲಿ ಶೇ.4%ರಷ್ಟು ಏರಿಕೆಯಾಗಿದ್ದು, 1,81,062 ಮೆಟ್ರಿಕ್ ಟನ್ ತಲುಪಿದೆ. ಸತತ ನಾಲ್ಕನೇ ವರ್ಷ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೊಳೆತುಹೋಗುವ ಪದಾರ್ಥಗಳ ರಫ್ತಿನಲ್ಲಿ ಭಾರತದ ನಂ.1 ವಿಮಾನ ನಿಲ್ದಾಣವಾಗಿ ಹೊರಹೊಮ್ಮುವ ಮೂಲಕ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಇದು ದೇಶದ ಕೃಷಿ ಪೂರೈಕೆ ಸರಪಳಿಯನ್ನು ಬಲಪಡಿಸುವಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾತ್ರವನ್ನು ಒತ್ತಿ ಹೇಳುತ್ತದೆ. ಜೊತೆಗೆ, ವಿಮಾನ ನಿಲ್ದಾಣವು ಮಾವು ಮತ್ತು ಕೊತ್ತಂಬರಿ ಸೊಪ್ಪಿನ ರಫ್ತಿನಲ್ಲಿ ಮುನ್ನಡೆ ಸಾಧಿಸಿದ್ದು, ಸಿದ್ಧ ಉಡುಪುಗಳು, ಔಷಧಗಳು ಮತ್ತು ಯಂತ್ರೋಪಕರಣಗಳ ಭಾಗಗಳ ಸಾಗಣೆಯಲ್ಲೂ ಹೆಚ್ಚಳವಾಗಿದೆ. ಸರಕು ಸಾಗಣೆಗೆ ಮೀಸಲಾದ 12 ವಿಮಾನಯಾನ ಸಂಸ್ಥೆಗಳ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿನಿಂದ ಸಿಂಗಾಪುರ, ಲಂಡನ್, ಫ್ರಾಂಕ್‌ಫರ್ಟ್, ಚಿಕಾಗೊ ಮತ್ತು ಮಸ್ಕತ್‌ನಂತಹ ಪ್ರಮುಖ ರಫ್ತು ಕೇಂದ್ರಿತ ನಗರಗಳನ್ನು ಸಂಪರ್ಕಿಸುತ್ತದೆ. ಶೆನ್ಜೆನ್, ಸಿಂಗಾಪುರ್, ಶಾಂಘೈ, ಹಾಂಗ್ ಕಾಂಗ್ ಮತ್ತು ಫ್ರಾಂಕ್‌ಫರ್ಟ್ ನಗರಗಳು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಸರಕುಗಳು ಆಮದಾಗುವ ಪ್ರಮುಖ ತಾಣಗಳಾಗಿವೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಅವರು ಮಾತನಾಡಿ, ಬೆಂಗಳೂರು ಮತ್ತು ಭಾರತದಲ್ಲಿ ವಾಯುಯಾನದ ಬೆಳವಣಿಗೆಯ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, ದಕ್ಷಿಣ ಮತ್ತು ಮಧ್ಯ ಭಾರತದ ಹೆಬ್ಬಾಗಿಲಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ವಾಯುಯಾನ ಪ್ರದೇಶ, ಲ್ಯಾಂಡ್‌ಸೈಡ್ ಮತ್ತು ಟರ್ಮಿನಲ್ ಸಾಮರ್ಥ್ಯಗಳ ವಿಸ್ತರಣೆಗೆ ಇನ್ನಷ್ಟು ಹೂಡಿಕೆ ಹೆಚ್ಚಿಸುವತ್ತ ಗಮನಹರಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 17,000 ಕೋಟಿಗಿಂತಲೂ ಹೆಚ್ಚು ಹೂಡಿಕೆಯೊಂದಿಗೆ, ಈ ಪ್ರದೇಶದಲ್ಲಿ ಪ್ರಯಾಣಿಕರು ಮತ್ತು ಸರಕು ಸಾಗಣೆಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ನಾವು ಸಿದ್ಧರಾಗಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಗಮನಾರ್ಹವಾದ ಬೆಳವಣಿಗೆ ಸಾಧಿಸುತ್ತಿದ್ದು, ಸಾಧನೆಗಳತ್ತ ಮುನ್ನುಗ್ಗುತ್ತಿದೆ. ಈ ಮೂಲಕ, ಜಾಗತಿಕವಾಗಿ ಪ್ರಮುಖ ವಿಮಾನಯಾನ ಕೇಂದ್ರಗಳಲ್ಲಿ ಒಂದಾಗಿ ಬದ್ಧತೆಯನ್ನು ಹೆಚ್ಚಿಸಿಕೊಂಡಿದೆ.ಇದನ್ನೂ ಓದಿ: ಸಿಂಧನೂರು ಕೊಲೆ ಪ್ರಕರಣದ ತೀರ್ಪು ಪ್ರಕಟ – ಮೂವರಿಗೆ ಮರಣದಂಡನೆ, 9 ಮಂದಿಗೆ ಜೀವಾವಧಿ ಶಿಕ್ಷೆ