ಆರ್ಮುಗಂ ರವಿಶಂಕರ್ ಆ್ಯಕ್ಟರ್ ಮಾತ್ರವಲ್ಲ ಡೈರೆಕ್ಟರ್, ರೈಟರ್, ಸಿಂಗರ್, ವಾಯ್ಸ್ ಓವರ್ ಆರ್ಟಿಸ್ಟ್ ಕೂಡ ಹೌದು. ಸಿನಿಕೆರಿಯರ್ ಆರಂಭದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು. ಅನಂತರ ಒಂದೊಂದೆ ಮೆಟ್ಟಿಲುಗಳನ್ನೇರುತ್ತಾ ನಟನಾಗುವ ತಮ್ಮ ಕನಸನ್ನ ಈಡೇರಿಸಿಕೊಂಡರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep) ನಟನೆಯ ‘ಕೆಂಪೇಗೌಡ’ (Kempegowda) ಸಿನಿಮಾದಲ್ಲಿ ಆರ್ಮುಗಂ ಪಾತ್ರದಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದರು. ಅಲ್ಲಿವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಕೂಡ ಬಿಗ್ ಬ್ರೇಕ್ ಸಿಕ್ಕಿರಲಿಲ್ಲ. ಆದರೆ, ಕೆಂಪೇಗೌಡ ಸಿನಿಮಾದಿಂದ ರವಿಶಂಕರ್ (Ravishankar) ಕೆರಿಯರ್ ಬದಲಾಯ್ತು. ನೇಮು-ಫೇಮು-ಕ್ರೇಜು-ಕಾಸು ಹೀಗೆ ಎಲ್ಲವೂ ಕೂಡ ಒಟ್ಟೊಟ್ಟಿಗೆ ದಕ್ಕಿತು, ಬೇಡಿಕೆ ಸೃಷ್ಟಿಯಾಯ್ತು. ಈಗಲೂ ಆ ಬೇಡಿಕೆ ತಗ್ಗಿಲ್ಲ, ಸದ್ಯಕ್ಕೆ ತಗ್ಗೋದು ಇಲ್ಲ ಅನ್ನೋದಕ್ಕೆ ಅವರ ಕೈಯಲ್ಲಿರುವ ಸಿನಿಮಾಗಳೇ ಸಾಕ್ಷಿ.
ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಆರ್ಮುಗಂ ರವಿಶಂಕರ್ ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀಗೆ ಮೊದಲ ಭಾರಿ ಆ್ಯಕ್ಷನ್ ಕಟ್ ಹೇಳಿದ್ದರು. ‘ದರ್ಗಿ’ ಸಿನಿಮಾ ಡೈರೆಕ್ಷನ್ ಮಾಡುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಅವತ್ತಿಗೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ತೆಲುಗಿಗೆ ರಿಮೇಕ್ ಕೂಡ ಆಗಿತ್ತು. ರವಿಶಂಕರ್ಗೆ ಈ ಚಿತ್ರದಿಂದ ಒಳ್ಳೆಯ ಹೆಸರು ಬಂದಿತ್ತು. ಆದರೆ, ಅದ್ಯಾಕೋ ಏನೋ ಗೊತ್ತಿಲ್ಲ ‘ದರ್ಗಿ’ ನಂತರ ಡೈರೆಕ್ಷನ್ ಕಡೆ ಮುಖ ಮಾಡಿರಲಿಲ್ಲ. ಇದೀಗ, 20 ವರ್ಷಗಳು ಉರುಳಿದ್ಮೇಲೆ ಮತ್ತೆ ಡೈರೆಕ್ಟರ್ ಹ್ಯಾಟ್ ತೊಡಲು ರೆಡಿಯಾಗಿದ್ದಾರೆ. ಅದು ಅವರ ಮಗನ ಸಿನಿಮಾಗೆ ಅನ್ನೋದು ವಿಶೇಷ.
ರವಿಶಂಕರ್ ಅವರ ಮಗ ಅದ್ವಯ್ ಶಂಕರ್ (Adhvay Shankar) ವಿದೇಶದಲ್ಲಿ ನಟನಾ ತರಬೇತಿಯನ್ನು ಪಡೆದುಕೊಂಡಿದ್ದಾರೆ. ವಿದ್ಯಾಭ್ಯಾಸವೆಲ್ಲ ಮುಗಿಸಿ ವಾಪಾಸ್ ಹುಟ್ಟೂರಿಗೆ ಮರಳಿರುವ ಮಗನನ್ನು ಬಣ್ಣದ ಜಗತ್ತಿಗೆ ಪರಿಚಯಿಸಿದ್ದಾರೆ. ತಾತನಂತೆ, ಅಪ್ಪ-ಚಿಕ್ಕಪ್ಪರಂತೆ ಕಲೆ ರಕ್ತಗತವಾಗಿ ಬಂದಿರುವುದರಿಂದ ಮುಖಕ್ಕೆ ಬಣ್ಣ ಹಚ್ಚಲು ಅದ್ವಯ್ ಕೂಡ ಓಕೆ ಹೇಳಿದ್ದು, ಪುತ್ರನ ಚೊಚ್ಚಲ ಚಿತ್ರಕ್ಕೆ ತಾವೇ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ನಟ ಕಮ್ ನಿರ್ದೇಶಕ ರವಿಶಂಕರ್.
ಇಂದು ಆಯುಧಪೂಜೆ ಅಂಗವಾಗಿ ಅದ್ವಯ್ ಚೊಚ್ಚಲ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ ‘ಸುಬ್ರಹ್ಮಣ್ಯ’ (Subrahmanya Film) ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಪೋಸ್ಟರ್ನಲ್ಲಿ ದೈವಿಕ ಅಂಶಗಳು ಹೈಲೆಟ್ ಆಗಿವೆ. ಪೋಸ್ಟರ್ನಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಮತ್ತು ಅವರ ವಾಹನ ನವಿಲನ್ನು ತೋರಿಸಲಾಗಿದೆ. ನಾಯಕ ಅದ್ವಯ್ ಒಂದು ಕೈಯಲ್ಲಿ ಜ್ವಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ನಿಗೂಢವಾಗಿ ಕಾಣುವ ಪುಸ್ತಕವನ್ನು ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ:‘ಮಗ್ಗಿ ಪುಸ್ತಕ’ದ ಫಸ್ಟ್ ಲುಕ್ ಲಾಂಚ್ ಮಾಡಿದ ಯದುವೀರ ಒಡೆಯರ್
ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ರಾಜ್ ತೋಟ ಕ್ಯಾಮೆರಾ ಹಿಡಿದಿದ್ದು, ಕೆಜಿಎಫ್ ಸಲಾರ್ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಸಂಗೀತ, ವಿಜಯ್ ಎಂ ಕುಮಾರ್ ಸಂಕಲನ, ಮಾಸ್ತಿ ಸಂಭಾಷಣೆ ಸುಬ್ರಹ್ಮಣ್ಯ ಸಿನಿಮಾಕ್ಕಿದೆ. ಎಸ್ ಜಿ ಮೂವೀ ಮೇಕರ್ಸ್ ಬ್ಯಾನರ್ ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಬಂಡವಾಳ ಹಾಕಿದ್ದು, ಪ್ರವೀಣಾ ಕಡಿಯಾಲ ಹಾಗೂ ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸುಬ್ರಹ್ಮಣ್ಯ ಸಿನಿಮಾ ತಯಾರಾಗುತ್ತಿದ್ದು, ಡಿಸೆಂಬರ್ನಿಂದ ಚಿತ್ರತಂಡದ ಶೂಟಿಂಗ್ ಶುರುವಾಗಲಿದೆ.