ಉಡುಪಿ: ಇಲ್ಲಿನ ಶಿರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮೀಜಿಯವರ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಕೇಮಾರು ಮಠಾಧೀಶ ಶ್ರೀಈಶ ವಿಠಲದಾಸ ಸ್ವಾಮೀಜಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವೇಳೆ ಫುಡ್ ಪಾಯಿಸನ್ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಮಠದಲ್ಲಿ ಎಲ್ಲರು ಊಟ ಮಾಡಿದ್ದಾರೆ. ಆದ್ರೆ ಸ್ವಾಮೀಜಿಯೊಬ್ಬರಿಗೆ ಮಾತ್ರ ಯಾಕೆ ಫುಡ್ ಪಾಯಿಸನ್ ಆಗ್ಬೇಕು ಅಂತ ಪ್ರಶ್ನಿಸಿದ್ರು. ಹಾಗೇ ಆಗೋದಾದ್ರೆ ಎಲ್ಲರೂ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಬೇಕಿತ್ತು. ಹೀಗಾಗಿ ಒಂದು ವೇಳೆ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ರು.
ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಇದೆ ಅಂತ ಡಾಕ್ಟರ್ ಹೇಳಿದ್ದಾರೆ. ಆದ್ರೆ ಅದರ ಬಗ್ಗೆ ಸಮಗ್ರ ತನಿಖೆ ನಡೆಸಲಿ. ವೈದ್ಯರು ಬರೀ ಹೇಳಿದ್ರೆ ಸಾಲದು ಆ ಬಗ್ಗೆ ವರದಿ ಕೊಡಲಿ. ಅಲ್ಲದೇ ಪೊಲೀಸರು ಕೂಡ ಸಮಗ್ರ ತನಿಖೆ ನಡೆಸಬೇಕಿದೆ. ಹಾಗೆಯೇ ಸರ್ಕಾರ ಕೂಡಲೇ ಮಧ್ಯಪ್ರವೇಶಿಸದಿದ್ದರೆ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗುತ್ತದೆ ಅಂತ ಅವರು ಸರ್ಕಾರವನ್ನು ಆಗ್ರಹಿಸಿದರು.
ಈಗಾಗಲೇ ಸಿಎಂ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದೇವೆ. ಆದ್ರೆ ಸಿಎಂ ಅವರು ಐಜಿಗೆ ಹೇಳಿ ಅದನ್ನು ಸರಿಮಾಡುತ್ತೇನೆ ಅಂದಿದ್ದಾರೆಂಬ ಮಾಹಿತಿ ಇದೆ. ಆದ್ರೆ ಈ ಬಗ್ಗೆ ಸ್ಪಷ್ಟತೆ ಇಲ್ಲ ಅಂದ್ರು. ಆದ್ರೆ ಇಲ್ಲಿಯವರೆಗೂ ಯಾವುದು ಸರಿಯಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಧ್ಯಪ್ರವೇಶಿಸಿ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಲಿ. ಈ ಮೂಲಕ ಗೊಂದಲಗಳನ್ನು ಪರಿಹಾರ ಮಾಡಲಿ ಅಂತ ಆಗ್ರಹಿಸಿದ್ರು.
ನಾಲ್ಕೈದು ದಿನದ ಹಿಂದೆಯಷ್ಟೇ ಸ್ವಾಮೀಜಿಗಳ ಜೊತೆ ಮಾತನಾಡಿದ್ದೇನೆ. ನನಗೆ ನನ್ನ ದೇವರು ಬೇಕು. ಹೀಗಾಗಿ ನಾನು ಕಾನೂನಾತ್ಮಕ ಹೋರಾಟ ಮಾಡುತ್ತೇನೆ. ಹೀಗಾಗಿ ಅವರು ಪಟ್ಟದ ದೇವರು ಸಿಕ್ಕಿಲ್ಲ ಅಂತ ಬಿಕ್ಕಿ ಬಿಕ್ಕಿ ಅಳುತ್ತಾ ಇದ್ದರು. ಆವಾಗ ನಾನು ಕಾನೂನಾತ್ಮಕ ರೀತಿಯಲ್ಲಿ ಹೋರಾಟ ಮಾಡುವ. ಅದರ ಬಗ್ಗೆ ನೀವು ಯಾವುದೇ ರೀತಿಯಲ್ಲಿ ಟೆನ್ಶನ್ ತೆಗೆದುಕೊಳ್ಳಬೇಡಿ ಅಂತ ಹೇಳಿದ್ದೆ. ಇದೇ ವೇಳೆ ನಾನು ಸಾಯುವುದಿಲ್ಲ. 71 ವರ್ಷ ಬದುಕುತ್ತೇನೆ. ನಂಗೇನೂ ತೊಂದ್ರೆ ಇಲ್ಲ ಅಂತಾನೂ ಹೇಳಿದ್ದರು. ಹೀಗಾಗಿ ಆರೋಗ್ಯದಲ್ಲಿದ್ದವರು ತಕ್ಷಣವೇ ಮೃತಪಟ್ಟಿರುವುದು ಭಕ್ತಾಧಿಗಳಿಗೆ ಗೊಂದಲು ಉಂಟಾಗಿದೆ ಅಂತ ಹೇಳಿದ್ರು.
ನನ್ನ ಜೊತೆ ಮಾತಾಡಿದ ಮರುದಿನವೇ ವನಮಹೋತ್ಸವ ಆಚರಿಸಿಕೊಂಡು ಅತ್ಯಂತ ಲವಲವಿಕೆಯಿಂದಲೇ ಇದ್ದರು. ಒತ್ತಡದಲ್ಲಿದ್ದರು ಆದ್ರೆ ಸಾಯುವಂತಹ ಅನಾರೋಗ್ಯ ಏನೂ ಅವರಿಗೆ ಇರಲಿಲ್ಲ ಅಂದ್ರು. ಒಟ್ಟಿನಲ್ಲಿ ಬಡವರ ಪರ ಇದ್ದವರು, ಕಲಾಪೋಷಕರನ್ನು ಪೋಷಿಸಿದ ಒಬ್ಬೊಳ್ಳೆಯ ಸ್ವಾಮೀಜಿ, ಜಾತಿ ಮತದ ಎಲ್ಲೆಯನ್ನು ಮೀರಿ ಎಲ್ಲರನ್ನು ಪ್ರೀತಿಸುತ್ತಿದ್ದರು ಅಂದ್ರು.