ಬಾಹುಬಲಿ, ಆರ್.ಆರ್.ಆರ್ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಂಗೀತ ಸಂಯೋಜನೆ (Music Director) ಮಾಡಿರುವ ಎಂ.ಎಂ.ಕೀರವಾಣಿ (MM Keeravani) ಬರೋಬ್ಬರಿ 27 ವರ್ಷಗಳ ನಂತರ ಮಲಯಾಳಂ ಸಿನಿಮಾ ರಂಗಕ್ಕೆ ಮರು ಪ್ರವೇಶ ಮಾಡುತ್ತಿದ್ದಾರೆ. ಎರಡೂವರೆ ದಶಕದ ನಂತರ ಮಲಯಾಳಂ (Malayalam) ಸಿನಿಮಾ ರಂಗಕ್ಕೆ ಕೀರವಾಣಿ ಬರುತ್ತಿರುವುದು ಸಹಜವಾಗಿಯೇ ಆ ಚಿತ್ರೋದ್ಯಮಕ್ಕೆ ಸಂಭ್ರಮ ತಂದಿದೆ.
Advertisement
1996ರಲ್ಲಿ ಬಿಡುಗಡೆಯಾದ ದೇವರಾಗಂ ಹೆಸರಿನ ಮಲಯಾಳಂ ಸಿನಿಮಾಗೆ ಕೊನೆಯದಾಗಿ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ಹಾಡುಗಳು ಸಖತ್ ಹಿಟ್ ಕೂಡ ಆಗಿದ್ದವು. ಆದರೂ, ನಂತರ ಅವರು ಮಲಯಾಳಂ ಸಿನಿಮಾಗಳಿಗೆ ಸಂಗೀತ ಮಾಡಲು ಒಪ್ಪಿಕೊಳ್ಳಲಿಲ್ಲ. 27 ವರ್ಷಗಳ ನಂತರ ಮತ್ತೆ ಅವರು ಮಲಯಾಳಂ ಚಿತ್ರೋದ್ಯಮಕ್ಕೆ ಕಾಲಿಡುತ್ತಿದ್ದಾರೆ.
Advertisement
Advertisement
ಸದ್ಯ ಅವರು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ಮ್ಯಾಜಿಷಿಯನ್ (Magician) ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಭಾನುವಾರವಷ್ಟೇ ಈ ಸಿನಿಮಾದ ಮುಹೂರ್ತ ನಡೆದಿದೆ. ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದ ಕೀರಾವಣಿ, ತುಂಬಾ ವರ್ಷಗಳ ನಂತರ ಮತ್ತೆ ಈ ಚಿತ್ರೋದ್ಯಮಕ್ಕೆ ಬರುತ್ತಿರುವದು ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ.
Advertisement
ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದ ನಂತರ ಕೀರವಾಣಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ, ಇವರು ದುಬಾರಿ ಸಂಗೀತ ನಿರ್ದೇಶಕರಾಗಿದ್ದಾರೆ. ಹೀಗಿದ್ದಾಗಲೂ ಮಲಯಾಳಂ ಚಿತ್ರವನ್ನು ಒಪ್ಪಿಕೊಂಡಿದ್ದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.