ಬೇಸಿಗೆ ಕಾಲ ಶುರುವಾಗಿದ್ದು, ಉರಿಬಿಸಿಲು ಮಾತ್ರ ಎಂದಿನಂತೆ ಈ ಬಾರಿಯೂ ಜೋರಾಗಿಯೇ ಇದೆ. ಅದರಲ್ಲೂ ಸೂರ್ಯನ ಕಿರಣಗಳು ನೇರವಾಗಿ ನಮ್ಮ ದೇಹದ ಮೇಲೆ ಬೀಳುವುದರಿಂದ ಚರ್ಮವು ಹಾನಿಯಾಗುತ್ತದೆ. ಸನ್ ಟ್ಯಾನ್, ಸನ್ ಬರ್ನ್ ನಂತಹ ಸಮಸ್ಯೆಗಳು ಎದುರಾಗುತ್ತದೆ. ಸುಡು ಬಿಸಿಲಿನಲ್ಲಿ ಮೈಯೊಡ್ಡಿಕೊಂಡು ಹೋದರೆ, ಮೈಯೆಲ್ಲಾ ಕಲೆಗಳು ಮೂಡುವುದು. ಅದರಲ್ಲೂ ಕೈ ಮತ್ತು ಮುಖದ ಮೇಲೆ ಇದು ಹೆಚ್ಚಾಗಿರುವುದು.
ಬೇಸಿಗೆಯ ಕಾಲ ಬಂತೆಂದರೆ ಆರೋಗ್ಯ ಕಾಳಜಿ ಮಾತ್ರವಲ್ಲ, ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಕೆಲವೊಮ್ಮೆ ಎಷ್ಟೇ ಕಾಳಜಿ ಮಾಡಿದರೂ ಸುಡುವ ಬಿಸಿಲಿನಿಂದ ಚರ್ಮವು ಬೇಗನೇ ಟ್ಯಾನ್ ಆಗುತ್ತದೆ, ಚರ್ಮ ಸುಟ್ಟಂತೆ ಆಗಿ ಶುಷ್ಕವಾಗುತ್ತದೆ. ಬೇಸಿಗೆಯಲ್ಲಿ ಟ್ಯಾನಿಂಗ್ (Tanning), ಪಿಗ್ಮೆಂಟೇಶನ್ ಮತ್ತು ಸನ್ ಬರ್ನ್ ಸಾಮಾನ್ಯ ಸಮಸ್ಯೆಗಳಾಗಿವೆ. ಹಾಗೇ, ಸೂರ್ಯನ UVA ಕಿರಣಗಳು ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ಚರ್ಮ ಹಾನಿಗೊಳಗಾಗುತ್ತದೆ.
ಬೇಸಿಗೆಯಲ್ಲಿ ಚರ್ಮವನ್ನು ರಕ್ಷಿಸಲು ಸನ್‍ಸ್ಕ್ರೀನ್ (Sunscreen) ಅಥವಾ ಲೋಷನ್‌ಗಳು ಅತ್ಯಗತ್ಯ. ಆದರೆ ಅನೇಕ ಮಂದಿ ಸನ್‍ಸ್ಕ್ರೀನ್ ಹಚ್ಚಿ ಕೂಡ ಸಮಸ್ಯೆಗೊಳಗಾಗುತ್ತಾರೆ. ಏಕೆಂದರೆ ಕೆಲ ಲೋಷನ್‌ಗಳು ಕೆಲವರ ಚರ್ಮದ ಪ್ರಕಾರಕ್ಕೆ ಸರಿ ಹೊಂದುವುದಿಲ್ಲ ಅಥವಾ ಮೊಡವೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿ ನಮ್ಮ ಚರ್ಮದ ವಿಧ ಹಾಗೂ ಯಾವ ಬಗೆಯ ಸನ್‍ಸ್ಕ್ರೀನ್ ಕ್ರೀಮ್ ಬಳಕೆ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.
ಚರ್ಮಗಳಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ ಒಣ ಚರ್ಮ (Dry Skin), ಎಣ್ಣೆಯುಕ್ತ ಚರ್ಮ (Oily Skin), ಸಂಯೋಜಿತ ಚರ್ಮಗಳು (Combination Skin). ಇದರಲ್ಲಿ ಕೆಲವರ ಚರ್ಮ ಒಂದೊಂದು ರೀತಿಯ ವಿಧಗಳಿಗೆ ಹೊಂದಿಕೊಂಡಿರುತ್ತದೆ. ಈ ಮೂರು ವಿಧದ ಚರ್ಮದ ರೀತಿ ಹೊಂದಿರುವವರೆಗೂ ಬೇರೆ ಬೇರೆ ರೀತಿಯಾದಂತಹ ಚರ್ಮದ ಆರೈಕೆಯ ನಿಯಮಗಳಿರುತ್ತದೆ. ಅದರ ಅನುಗುಣವಾಗಿಯೇ ಚರ್ಮಕ್ಕೆ ಸರಿಹೊಂದುವ ಸನ್‍ಸ್ಕ್ರೀನ್ ಅಥವಾ ಲೋಷನ್‌ಗಳನ್ನು ಬಳಸಬೇಕು.
ಸೂರ್ಯನ ಕಿರಣದಿಂದ ಚರ್ಮವನ್ನು ರಕ್ಷಿಸಲು ಸನ್‍ಸ್ಕ್ರೀನ್ ಕ್ರೀಮ್ ಅಥವಾ ಲೋಷನ್‌ಗಳನ್ನು ಬಳಸುತ್ತೇವೆ. ಇದು ಚರ್ಮದ ಮೇಲೆ ಉಂಟಾಗುವ ಹಾನಿ ಹಾಗೂ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಸನ್‌ಸ್ಕ್ರೀನ್‌ಗಳನ್ನು ಗಣನೀಯವಾಗಿ ಬಳಸುವುದರಿಂದ ಮುಖದಲ್ಲಿ ಮೊಡವೆ, ಶುಷ್ಕತೆ, ಸುಕ್ಕು, ತುರಿಕೆ ಸೇರಿದಂತೆ ಇನ್ನಿತರ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು ಎಂದು ಸಲಹೆ ನೀಡಲಾಗುವುದು. ಜೊತೆಗೆ ಚರ್ಮವು ಸಮಸ್ಯೆಗಳಿಂದ ಮುಕ್ತವಾಗಿರುತ್ತದೆ.
ಸನ್‌ಸ್ಕ್ರೀನ್ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು:
ಸನ್‌ಸ್ಕ್ರೀನ್ ಕ್ರೀಮ್‍ಗಳನ್ನು ಖರೀದಿಸುವಾಗ ಅದರ ಮೇಲೆ ಎಸ್‍ಪಿಎಫ್ ಪ್ರಮಾಣ ಎಷ್ಟಿದೆ ಎನ್ನುವುದನ್ನು ಮೊದಲು ಗಮನಿಸಬೇಕು. ಎಸ್‍ಪಿಎಫ್ (SPF) ಎಂದರೆ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್, ಇದು UVB ವಿಕಿರಣದ ವಿರುದ್ಧ ಸನ್‌ಸ್ಕ್ರೀನ್ ನೀಡುವ ರಕ್ಷಣೆಯ ಮಟ್ಟವನ್ನು ಅಳೆಯುತ್ತದೆ. ಸನ್‌ಸ್ಕ್ರೀನ್‌ಗಳು SPF 15, SPF 30 ಮತ್ತು SPF 50 ನಂತಹ ವಿಧಗಳಿವೆ.
ಸನ್‌ಸ್ಕ್ರೀನ್‌ಗಳನ್ನು ಆರಿಸುವಾಗ 30+ ಎಸ್‍ಪಿಎಫ್ ಗಿಂತ ಹೆಚ್ಚಿರಬೇಕು. 30 ಎಸ್‍ಪಿಎಫ್ ಕ್ರೀಮ್ ಗಳು ಶೇಕಡಾ 97 ರಷ್ಟು ಯುವಿಬಿ ಕಿರಣಗಳಿಂದ ರಕ್ಷಿಸಿದರೆ, 50 ಎಸ್‍ಪಿಎಫ್ ಕ್ರೀಮ್ ಶೇಕಡಾ 100ರಷ್ಟು ಯುವಿಬಿ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಸನ್‌ಸ್ಕ್ರೀನ್‌ನಲ್ಲಿ ಆಕ್ಟಿನೊಕ್ಸೇಟ್ ಮತ್ತು ಆಕ್ಸಿಬೆನ್‍ಝೋನ್ ನಂತಹ ಅಂಶಗಳು ಇವೆಯೇ ಎನ್ನುವುದನ್ನು ಪರಿಶೀಲಿಸಬೇಕು. ಕೆಲವರಿಗೆ ರಾಸಾಯನಿಕ ಉತ್ಪನ್ನಗಳಿಂದ ಅಲರ್ಜಿ ಉಂಟಾಗುವುದು. ಹಾಗಾಗಿ ಸನ್ ಸ್ಕ್ರೀನ್‌ಗಳನ್ನು ಆರಿಸುವಾಗ ಎಚ್ಚರವಹಿಸಬೇಕು.
ಸನ್‌ಸ್ಕ್ರೀನ್‌ಗಳನ್ನು ಬಳಸುವ ವಿಧಾನ
ಸನ್‌ಸ್ಕ್ರೀನ್ ಹಚ್ಚುವ ಮೊದಲು ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಜೊತೆಗೆ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಕ್ರೀಮ್ ಅನ್ನು ಮುಖಕ್ಕೆ ಅನ್ವಯಿಸುವ ಮೊದಲು ನಿಮ್ಮ ಕೈಗಳಿಗೆ ಸ್ವಲ್ಪ ಹಚ್ಚಿಕೊಂಡು ಪರೀಕ್ಷಿಸಿಕೊಳ್ಳಬೇಕು. ಮನೆಯಿಂದ ಹೊರಗೆ ಹೋಗುವ ಮೊದಲು ಅಂದರೆ 30 ನಿಮಿಷ ಮೊದಲು ಮುಖದ ಭಾಗಗಳಿಗೆ ಹಾಗೂ ಕೈಕಾಲುಗಳಿಗೆ ಕ್ರೀಮ್‌ಗಳನ್ನು ಹಚ್ಚಿಕೊಳ್ಳಬೇಕು. ಹೆಚ್ಚು ಬೆವರುವರಾದರೆ ಅಥವಾ ಮುಖವನ್ನು ಆಗಾಗ ಉಚ್ಚಿಕೊಳ್ಳುವವರಾದರೆ ಪ್ರತಿ 2 ಗಂಟೆಗೊಮ್ಮೆ ಸನ್‌ಸ್ಕ್ರೀನ್‌ಗಳನ್ನು ಹಚ್ಚಿಕೊಳ್ಳಬೇಕು.
ಈ ರೀತಿಯಾಗಿ ಬಿಸಿಲಿನಿಂದ ಮುಖದ ಸೌಂದರ್ಯ ವನ್ನು ಕಾಪಾಡಿಕೊಳ್ಳಬಹುದು. ಸನ್‌ಸ್ಕ್ರೀನ್‌ಗಳನ್ನು ಬರೀ ಬೇಸಿಗೆಗಾಲದ ಹೊರತು ಎಲ್ಲಾ ಕಾಲಗಳಲ್ಲೂ ಬಳಸುವುದರಿಂದ ಚರ್ಮವು ಸುಂದರವಾಗಿರುತ್ತದೆ. ಮತ್ತು ಮುಖದ ಸುಕ್ಕುಗಳನ್ನು ನಿವಾರಿಸುತ್ತದೆ.