ಬೆಂಗಳೂರು: ಸಿಎಂ ಅಮೆರಿಕಕ್ಕೆ ತೆರಳುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ನಡೆದಿದ್ದು, ಕೇಂದ್ರ ಬಜೆಟ್ ಮರುದಿನವೇ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ 13 ಮಂದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮಧ್ಯೆ ನಾವು ಆಪರೇಷನ್ ಕಮಲ ಮಾಡಿಲ್ಲ ಎಂದು ಹೇಳುತ್ತಿರುವ ಬಿಜೆಪಿ ನಾಯಕರಿಗೆ ಗೃಹ ಸಚಿವ ಅಮಿತ್ ಶಾ ಅವರು ಖಡಕ್ ಸೂಚನೆ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಸೂಚನೆಯೇನು?
ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ದೂರದಲ್ಲೇ ನಿಂತು ಎಲ್ಲವನ್ನೂ ಗಮನಿಸಿಕೊಳ್ಳಿ. ಈ ಕುರಿತು ಯಾವ ಶಾಸಕರಿಗೂ ಕರೆ ಮಾಡಲು ಹೋಗಬೇಡಿ. ಒಂದು ವಾರದವರೆಗೂ ಸುಮ್ಮನಿದ್ದು ಮೈತ್ರಿ ಪಕ್ಷಗಳ ವಿದ್ಯಮಾನಗಳನ್ನು ಗಮನಿಸುತ್ತಿರಿ. ನಂತರ ವಿಧಾನಸಭೆ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿ ಎಂದು ತಿಳಿಸಿದ್ದಾರೆ.
ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಸಂಕಷ್ಟದಲ್ಲಿದೆ. ಹೀಗಾಗಿ ಈ ಮಧ್ಯೆ ರಾಜಭವನಕ್ಕೂ ಭೇಟಿ ಕೊಡಬೇಡಿ. ಎಲ್ಲವನ್ನೂ ನಾವೇ ನಿಭಾಯಿಸುತ್ತೇವೆ. ಯಾವಾಗ ನಿಮ್ಮ ಅಗತ್ಯವಿದೆ ಎಂದು ತಿಳಿಸುತ್ತೇವೆ. ಯಾವ ನಾಯಕರೂ, ಶಾಸಕರೂ ಆಪರೇಷನ್ ಕಮಲದ ಬಗ್ಗೆ ಮಾತನಾಡಬಾರದು. ಪಕ್ಷದ ಎಲ್ಲ ಶಾಸಕರ ಮೇಲೆ ಕಣ್ಣಿಡಿ. ಶಾಸಕರನ್ನು ಬೆಂಗಳೂರಿಗೆ ಕರೆಸಿ ಸಭೆ ನಡೆಸಿ ತಾಕೀತು ಮಾಡಿ ಎಂದು ಹೇಳುವ ಮೂಲಕ ರಿವರ್ಸ್ ಆಪರೇಷನ್ ಗೆ ಅಮಿತ್ ಶಾ ಸುಳಿವು ಕೊಟ್ಟಿದ್ದಾರೆ ಎನ್ನಲಾಗಿದೆ.
ಸೂಚನೆಯ ಬೆನ್ನಲ್ಲೇ ನಾಳೆ ಬಿಜೆಪಿಯ ಎಲ್ಲಾ ಶಾಸಕರನ್ನು ಬೆಂಗಳೂರಿಗೆ ಬರುವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ರಿವರ್ಸ್ ಆಪರೇಷನ್ ಭೀತಿಯೂ ಬಿಜೆಪಿಯನ್ನು ಕಾಡುತ್ತಿದ್ದು, ಎಲ್ಲಾ ಶಾಸಕರನ್ನು ಒಂದೇ ಕಡೆ ಇರಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಇತ್ತ ಜೆಡಿಎಸ್ ಕೂಡ ಇಂದು ಅಳಿದುಳಿದ ಶಾಸಕರ ಸಭೆ ನಡೆಸಿ, ಯಾರೂ ಬಿಜೆಪಿಯ ಆಪರೇಷನ್‍ಗೆ ಬಲಿಯಾಗಬಾರದು ಎಂದು ಸೂಚನೆ ನೀಡಲಿದೆ.
ಒಟ್ಟಿನಲ್ಲಿ ಸದ್ಯದ ಬೆಳವಣಿಗೆಯಲ್ಲಿ ತಮ್ಮದೇನು ಪಾತ್ರ ಇಲ್ಲ ಎನ್ನುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮುಂದೆ ಎಲ್ಲಾ ಒಳ್ಳೇದಾಗಲಿಸ ಎಂದು ಮನೆ ದೇವರ ಮೊರೆ ಹೋಗುತ್ತಿದ್ದಾರೆ. ಬೆಳಗ್ಗೆ ತುಮಕೂರು, ಹಾಸನ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಮಾಡಿ, ನಂತರ ಬಾಗೂರು, ನವಿಲೆ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಹೇಮಾವತಿ ನಾಲೆ ವೀಕ್ಷಣೆ ಮಾಡಿ, ಆ ಬಳಿಕ ಯಡಿಯೂರು ಸಿದ್ಧಲಿಂಗೇಶ್ವರನ ದರ್ಶನ ಮಾಡಲಿದ್ದಾರೆ. ಸಂಜೆ ಸಿದ್ಧಗಂಗಾ ಮಠಕ್ಕೂ ಭೇಟಿ ನೀಡಲಿದ್ದಾರೆ.