LatestMain PostNational

ಕೇದಾರನಾಥದಲ್ಲಿ ಧ್ಯಾನ ಮಾಡಿದ್ದು ರಾಜಕೀಯ ಲಾಭಕ್ಕಲ್ಲ- ಮೋದಿ

Advertisements

– ಮನ್ ಕೀ ಬಾತ್‍ನಲ್ಲಿ ಪ್ರಧಾನಿ ಸ್ಪಷ್ಟನೆ

ನವದೆಹಲಿ: ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಮೋದಿ ದಿಢೀರನೇ ಕೇದಾರನಾಥಕ್ಕೆ ತೆರಳಿ ಒಂದು ದಿನ ಧ್ಯಾನಕ್ಕೆ ಕುಳಿತರು. ಈ ವೇಳೆ ವಿರೋಧ ಪಕ್ಷಗಳು ಹಾಗೂ ಇತರರು ರಾಜಕೀಯ ಲಾಭಕ್ಕಾಗಿ ಧ್ಯಾನ ಮಾಡುತ್ತಿದ್ದು, ಇದೆಲ್ಲ ಡೋಂಗಿ ಎಂದೆಲ್ಲ ಟೀಕಿಸಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ಸರ್ಕಾರದ ರಚನೆಯಾದ ನಂತರ ಇಂದು ತಮ್ಮ ಮೊದಲ ‘ಮನ್ ಕೀ ಬಾತ್’ನಲ್ಲಿ ಉತ್ತರಿಸಿದ್ದಾರೆ.

ಲೋಕಸಭಾ ಚುನಾವಣೆಯ ನಂತರ ಕೇದಾರನಾಥಕ್ಕೆ ಪ್ರವಾಸ ಮಾಡಿ ಧ್ಯಾನಕ್ಕೆ ಕುಳಿತಿದ್ದು, ರಾಜಕೀಯ ಲಾಭಕ್ಕಾಗಿ ಅಲ್ಲ. ಬದಲಿಗೆ ಅದು ನನ್ನ ಅಂತರಂಗವನ್ನು ಅರಿಯಲು ದೊರೆತ ಒಂದು ಅವಕಾಶ ಎಂದು ವಿವಾದದ ಕುರಿತು ಸ್ಪಷ್ಟಪಡಿಸಿದ್ದಾರೆ.

ಹಲವರು ಇದನ್ನು ರಾಜಕೀಯದ ದೃಷ್ಟಿಯಿಂದ ನೋಡಿದ್ದಾರೆ. ಆದರೆ ನನಗಿದು ನನ್ನ ಅಂತರಂಗವನ್ನರಿಯಲು ದೊರೆತ ಅವಕಾಶ. ಅಲ್ಲದೆ, ಕೊನೆಯ ಬಾರಿ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮಾಡಿದ್ದರ ಬೇಸರವನ್ನು ಹಾಗೂ ಆ ಸ್ಥಾನವನ್ನು ಕೇದಾರನಾಥ ಪ್ರವಾಸ ತುಂಬಿತು ಎಂದು ಮೋದಿ ವ್ಯಾಖ್ಯಾನಿಸಿದ್ದಾರೆ.

ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದು ಹಾಗೂ ಪುಸ್ತಕ ಓದುವುದರ ಕುರಿತು ಕೇಳುಗರಿಗೆ ನೆನಪಿದ್ದಾರೆ. ಇದೇ ವೇಳೆ ತಮ್ಮ ‘ಕೇದಾರನಾಥ ಪ್ರವಾಸ’ ಮತ್ತು ಲೋಕಸಭಾ ಚುನಾವಣೆಗೂ ಮುನ್ನ ಹಿಂದಿನ ಸರ್ಕಾರದ ಅವಧಿಯಲ್ಲಿ(ಫೆಬ್ರವರಿ) ನಡೆದ ಕೊನೆಯ ‘ಮನ್ ಕೀ ಬಾತ್’ನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ.

ಮತದಾನದ ನಂತರ ‘ಮನ್ ಕೀ ಬಾತ್’ಗೆ ಹಿಂದಿರುಗುವುದಾಗಿ ನೀಡಿದ್ದ ನನ್ನ ಭರವಸೆಗೆ ರಾಜಕೀಯದ ಅರ್ಥ ನೀಡಿ ಟೀಕಿಸಿದ್ದರು. ಅಲ್ಲದೆ, ‘ಅತಿಯಾದ ಆತ್ಮ ವಿಶ್ವಾಸ’ ಎಂದು ಅಲ್ಲಗಳೆದಿದ್ದರು. ಆದರೆ, ನಿಮ್ಮ ವಿಶ್ವಾಸದಿಂದ ನಾನು ಮರಳಿ ಬರಲು ನೆರವಾಯಿತು. ನೀವು ಆಹ್ವಾನಿಸದ ಹೊರತು ನನ್ನೊಬ್ಬನಿಂದಲೇ ಮರಳಿ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವಲ್ಲಿ ಮತದಾನದ ಮಹತ್ವವನ್ನು ವಿವರಿಸುವಾಗ ತುರ್ತು ಪರಿಸ್ಥಿತಿಯ ಉದಾಹರಣೆ ನೀಡಿದ್ದು, 1977ರಲ್ಲಿ ಹೇರಿದ ತುರ್ತು ಪರಿಸ್ಥಿತಿ ವೇಳೆ ಮೂಲಭೂತ ಹಕ್ಕುಗಳನ್ನು ಹೇಗೆ ಕಸಿದುಕೊಂಡಿದ್ದರು ಎಂದು ವಿವರಿಸಿದರು. ಅಲ್ಲದೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್ಲ ನಾಗರಿಕರಿಗೂ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು ಎಂದು ಮೋದಿ ವಿವರಿಸಿದ್ದಾರೆ.

ಪ್ರಜಾಪ್ರಭುತ್ವವೆಂದರೆ ಪ್ರತಿಯೊಬ್ಬ ಮತದಾರನಿಗೂ ಗೌರವ ಸಲ್ಲಿಸುವುದು. ಲೋಕಸಭಾ ಚುನಾವಣೆ ಮುಗಿಯುವ ಹೊತ್ತಿನಲ್ಲಿ ದೂರದ ಹಿಮಾಚಲ ಪ್ರದೇಶದಲ್ಲಿ ವಾಸಿಸುವ ಒಂಟಿ ಮಹಿಳೆಗೆ ಮತಗಟ್ಟೆ ಸ್ಥಾಪಿಸಲು ಚುನಾವಣಾಧಿಕಾರಿಗಳು ಎರಡು ದಿನಗಳ ಕಾಲ ಪ್ರಯಾಣಿಸಿ, ಹೇಗೆ ಕಷ್ಟಪಟ್ಟರು ಎಂಬುದನ್ನು ಇದೇ ವೇಳೆ ವಿವರಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕೆ ಸಂತಸವಾಗಿದೆ. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಇದೇ ವೇಳೆ ಯುವಕರಿಗೆ ಹಾಗೂ ಕೇಳುಗರಿಗೆ ಕರೆ ನೀಡಿದರು. ಇತ್ತೀಚೆಗೆ ಪ್ರೇಮ್‍ಚಂದ್ ಅವರ ಜನಪ್ರಿಯ ಕಥೆಗಳ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಈ ಪುಸ್ತಕ ಓದುತ್ತಿದ್ದಾಗ ಯುವಕನಾಗಿದ್ದಾಗ ನಾನು ಅನುಭವಿಸಿದ ಸಾಮಾಜಿಕ ಸವಾಲುಗಳು ನೆನಪಾದವು ಎಂದು ತಿಳಿಸಿದರು.

ತಿಂಗಳುಗಳ ನಂತರ ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹೊಸ ಸರ್ಕಾರ ರಚನೆಯಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ‘ಮನ್ ಕೀ ಬಾತ್’ ಇದಾಗಿದೆ.

Leave a Reply

Your email address will not be published.

Back to top button