ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ಒಡೆತನದ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡವಾಗಿದ್ದು, ಬೆಂಕಿ ತಗುಲಿದ್ದ 3 ಕಾರ್ಮಿಕರಲ್ಲಿ ಓರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ನಗರದ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿ ಇರುವ ಕಾರ್ಖಾನೆಯಲ್ಲಿ ನಡೆದಿದೆ.
ಅಶೋಕ ಚೌಹಾಣ್ (37) ಮೃತ ಕಾರ್ಮಿಕ. ಕಾರ್ಮಿಕರು ಬುಧವಾರ ಬೆಳಗ್ಗೆ ಅತಿಯಾದ ಚಳಿ ಹಿನ್ನೆಲೆ ಬ್ಯಾರಲ್‍ನಲ್ಲಿ ಬೆಂಕಿ ಹಾಕಿ ಕಾಯಿಸಿಕೊಳ್ಳುತ್ತಿದ್ದರು. ಬೆಂಕಿಯೂ ಹೆಚ್ಚು ಉರಿಯ ಬೇಕು ಅಂತ ಥಿನ್ನರ್ ಹಾಕಿದಾಗ ಒಮ್ಮೆಲೆ 3 ಕಾರ್ಮಿಕರಿಗೆ ಬೆಂಕಿ ತಗುಲಿದೆ. ನಂತರ ಓಡೋಡಿ ಬಂದು ನೀರಿನ ಪೈಪ್ ಕೆಳಗೆ ಕೂತು ಬೆಂಕಿ ನಂದಿಸಿಕೊಂಡಿದ್ದರು. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ
ಅದರಲ್ಲಿ ಅಶೋಕ ಎಂಬುವರಿಗೆ ಶೇ.80 ರಷ್ಟು ಬೆಂಕಿ ತಗುಲಿ ಗಾಯವಾಗಿತ್ತು. ಈ ಹಿನ್ನೆಲೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್.ಡಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ನಂತರ ಅಲ್ಲಿಂದ ಬೆಳಗಾವಿ ಕೆಎಲ್‍ಇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ನಿವಾಸಿಯಾದ ಮೃತ ಕಾರ್ಮಿಕನಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ. ಇದನ್ನೂ ಓದಿ: ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್ ಸೂಚನೆ
ಇನ್ನುಳಿದ ಇಬ್ಬರು ಕಾರ್ಮಿಕರಾದ ಪ್ರಮೋದ ಹಾಗೂ ಮೆಹಬೂಬ್ ಎಂಬುವವರಿಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.