ಬೆಂಗಳೂರು: ಎರಡನೇ ಸುತ್ತಿನ ಯುಜಿ ನೀಟ್ (UG NEET) ಅಖಿಲ ಭಾರತ ಸೀಟು ಹಂಚಿಕೆ ಫಲಿತಾಂಶ ಇಂದು ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಎರಡನೇ ಸುತ್ತಿನ ಅಖಿಲ ಭಾರತ ಯುಜಿ ನೀಟ್ ಎಂಸಿಸಿ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ, ಕೆಇಎನಿಂದ (KEA) ಹಂಚಿಕೆಯಾದ ಸೀಟಿಗೆ ಸೇರಲು ಅಥವಾ ಅಖಿಲ ಭಾರತ ಕೌನ್ಸಿಲಿಂಗ್ ಮೂಲಕ ಹಂಚಿಕೆಯಾದ ಸೀಟನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಯವನ್ನು ನೀಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಕೆಇಎದಿಂದ ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಂಡು ಅಖಿಲ ಭಾರತ ಸೀಟು ಉಳಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು, ಸೆ.20ರ ಬೆಳಿಗ್ಗೆ 11 ರೊಳಗೆ ಕೆಇಎದಿಂದ ಹಂಚಿಕೆಯಾದ ಯುಜಿನೀಟ್ ಸೀಟನ್ನು ಕೆಇಎ ಕಚೇರಿಗೆ ಖುದ್ದಾಗಿ ಬಂದು ರದ್ದು ಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇಂದು ನಾಗಮಂಗಲಕ್ಕೆ ಹೆಚ್‌ಡಿಕೆ ಭೇಟಿ – ನೊಂದವರಿಗೆ ಧನ ಸಹಾಯ
ಇಂತಹ ಅಭ್ಯರ್ಥಿಗಳಿಗೆ 10,000 ರೂ. ದಂಡ ವಿಧಿಸಿ, ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಸೀಟು ರದ್ದು ಪಡಿಸಿಕೊಳ್ಳುವ ಸಮಯದಲ್ಲಿ ಅಖಿಲ ಭಾರತ ಕೌನ್ಸಿಲಿಂಗ್ ನಲ್ಲಿ ಹಂಚಿಕೆಯಾದ ಸೀಟುಗಳ ವಿವರವನ್ನು ಕೆಇಎ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಕೆಇಎದಲ್ಲಿ ರದ್ದಾದ ಎಲ್ಲಾ ಸೀಟುಗಳನ್ನು ಪರಿಗಣಿಸಿ ಮತ್ತು ಅರ್ಹ ಅಭ್ಯರ್ಥಿಗಳು ಎರಡನೇ ಸುತ್ತಿಗೆ ನಮೂದಿಸಿದ ಅದೇ ಆದ್ಯತಾ ಕ್ರಮದಲ್ಲಿನ ಆಯ್ಕೆಗಳೊಂದಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ‘ರೀ ರನ್’ ಮಾಡಿ, ಎರಡನೇ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಆಯ್ಕೆಗಳ ಆದ್ಯತೆಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಇತರೆ ಅಭ್ಯರ್ಥಿಗಳಿಗೆ ದಂಡವಿಲ್ಲದೆ ಯಾವುದೇ ಸೀಟನ್ನು ರದ್ದು ಪಡಿಸುವುದಿಲ್ಲ. ಮುಂದಿನ ಪ್ರಕ್ರಿಯೆ ಮತ್ತು ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ ಹೇಳಿದ್ದಾರೆ. ಇದನ್ನೂ ಓದಿ: 2040ಕ್ಕೆ ಮಾನವ ಸಹಿತ ಚಂದ್ರಯಾನ – 2,104 ಕೋಟಿ ಅನುದಾನಕ್ಕೆ ಕೇಂದ್ರ ಅಸ್ತು