ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ರ‍್ಯಾಂಕ್ (Rank) ತಡೆಹಿಡಿದಿರುವ ಅಥವಾ ರ‍್ಯಾಂಕ್ ನೀಡದಿರುವ ಅಭ್ಯರ್ಥಿಗಳು ಆತಂಕಪಡುವ ಅಗತ್ಯ ಇಲ್ಲ. ಅಂತಹವರು ನಾಳೆಯಿಂದಲೇ ಕೆಇಎ ಬಿಡುಗಡೆ ಮಾಡುವ ಪೋರ್ಟಲ್‌ನಲ್ಲಿ ತಮ್ಮ ಅಂಕಗಳನ್ನು ದಾಖಲಿಸಿ ರ‍್ಯಾಂಕ್ ಪಡೆಯಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದರು.
Advertisement
ಸಿಇಟಿ ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಇಟಿಗೆ ಒಟ್ಟು 3.49 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 3.10 ಲಕ್ಷ ಅಭ್ಯರ್ಥಿಗಳು 737 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಪಿಯುಸಿಯಲ್ಲಿ ನೀಡಿದ್ದ ಯೂನಿಕ್ ಸಂಖ್ಯೆಯನ್ನು ಸಿಇಟಿಗೆ ಅರ್ಜಿ ಸಲ್ಲಿಸುವಾಗ ಕೆಲವರು ತಪ್ಪಾಗಿ ನಮೂದಿಸಿದ್ದ ಪಕ್ಷದಲ್ಲಿ ರ‍್ಯಾಂಕ್ (Rank Holder) ಪ್ರಕಟ ಆಗಿರುವುದಿಲ್ಲ. ಅಂತಹ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಸರಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಈ ರೀತಿ ರ‍್ಯಾಂಕ್ ತಡೆಹಿಡಿದಿರುವ ಸುಮಾರು 3,000 ಅಭ್ಯರ್ಥಿಗಳು ಇದ್ದಾರೆ. ಈ ತೀರ್ಮಾನದಿಂದ ಅಂತಹವರೆಲ್ಲರಿಗೂ ಅನುಕೂಲ ಆಗಲಿದೆ. ಪ್ರತಿಬಾರಿಯೂ ಈ ರೀತಿಯ ಒಂದಷ್ಟು ಮಂದಿ ತಪ್ಪುಗಳನ್ನು ಮಾಡುವ ಕಾರಣ ಹಾಗೆ ಆಗಿದೆ ಎಂದು ಅವರು ಸಮಜಾಯಿಷಿ ನೀಡಿದರು.
Advertisement
Advertisement
ಜಂಟಿ ಕೌನ್ಸೆಲಿಂಗ್:
ನೀಟ್ ಫಲಿತಾಂಶದ ನಂತರ ಹಾಗೂ ಅದರ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ನೋಡಿಕೊಂಡು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಒಟ್ಟಿಗೇ ಕೌನ್ಸೆಲಿಂಗ್ ಮಾಡಲಾಗುವುದು. ಇದರಿಂದ ಅನಗತ್ಯ ಗೊಂದಲ ತಪ್ಪಿಸಬಹುದು. ಹೀಗಾಗಿ ಕೌನ್ಸೆಲಿಂಗ್ ದಿನಾಂಕಗಳನ್ನು ನಂತರದ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ವಿವರಿಸಿದರು.
Advertisement
ಮತ್ತೊಂದು ಅವಕಾಶ:
ನೀಟ್ ಪರೀಕ್ಷೆ ತೆಗೆದುಕೊಂಡಿದ್ದರೂ ರಾಜ್ಯದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬೇಕಾದರೆ ಕೆಇಎಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ಆದರೆ, ಕೆಲವರು ಈ ರೀತಿ ಅರ್ಜಿ ಸಲ್ಲಿಸಿಲ್ಲ ಎಂದು ಹೇಳುತ್ತಿದ್ದು, ಅಂತಹವರಿಗೆ ಅನುಕೂಲ ಮಾಡಿಕೊಡಲು ನೀಟ್ ಫಲಿತಾಂಶದ ನಂತರ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.
ಸರ್ಕಾರಿ ಕೋಟಾ ಸೀಟು ಎಲ್ಲೂ ಹೋಗಲ್ಲ:
ವೃತ್ತಿಪರ ಕೋರ್ಸ್‌ಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳನ್ನು ಕೆಇಎ ಮೂಲಕವೇ ಹಂಚಿಕೆ ಮಾಡಲಾಗುತ್ತದೆ. ಈ ವಿಷಯದಲ್ಲಿ ಗೊಂದಲ ಬೇಡ. ಫಲಿತಾಂಶ ತಡವಾಯಿತು. ಹೀಗಾಗಿ ಎಲ್ಲಾ ಸೀಟುಗಳನ್ನು ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಹೆಚ್ಚಿನ ಡೊನೇಷನ್ ಪಡೆದು ಭರ್ತಿ ಮಾಡಿಕೊಳ್ಳುತ್ತೇವೆ ಎಂದು ಕೆಲವರು ಗೊಂದಲ ಸೃಷ್ಟಿಸುತ್ತಿದ್ದು, ಅಂತಹ ಊಹಾಪೋಹಗಳಿಗೆ ಕಿವಿಗೊಡಬೇಡಿ. ಕೆಇಎ ಮೂಲಕವೇ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಇಂತಹ ಸುಳ್ಳುಸುದ್ದಿಗಳಿಗೆ ಪೋಷಕರಾಗಲಿ/ ವಿದ್ಯಾರ್ಥಿಗಳಾಗಲಿ ಗಮನ ನೀಡಬಾರದು ಎಂದು ಪ್ರಸನ್ನ ಮನವಿ ಮಾಡಿದರು.
ಆನ್‌ಲೈನ್ ದಾಖಲೆ ಪರಿಶೀಲನೆ:
ಈ ಬಾರಿ ವಿಶೇಷ ಮಕ್ಕಳ ವೈದ್ಯಕೀಯ ತಪಾಸಣೆ ಬಿಟ್ಟರೆ ಬಹುತೇಕ ಎಲ್ಲ ದಾಖಲೆಗಳ ಪರಿಶೀಲನೆ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಯಾರೂ ಕೆಇಎ ಕಚೇರಿಗೆ ಬರುವ ಅಗತ್ಯ ಇರುವುದಿಲ್ಲ. ಅಭ್ಯರ್ಥಿಗಳು ಅಪ್ಲೋಡ್ ಮಾಡಿರುವ ಶೈಕ್ಷಣಿಕ ದಾಖಲೆಗಳನ್ನು (ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ, ಭಾಷಾ ಅಲ್ಪಸಂಖ್ಯಾತ ಮೀಸಲಾತಿ) ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆನ್‌ಲೈನ್‌ನಲ್ಲಿ ಪರಿಶೀಲನೆ ನಡೆಸಿ, ಮಂಜೂರಾತಿ ನೀಡುತ್ತಿದ್ದು, ಯಾವುದೇ ಗೊಂದಲ ಇಲ್ಲದೆ ಸಾಗಿದೆ. ಸೋಮವಾರಕ್ಕೆ ಇದು ಪೂರ್ಣವಾಗಲಿದೆ ಎಂದು ಹೇಳಿದರು.
ಸೀಟ್ ಮ್ಯಾಟ್ರಿಕ್:
ಪ್ರಸಕ್ತ ಸಾಲಿನ ಸೀಟ್ ಮ್ಯಾಟ್ರಿಕ್ ಇನ್ನೂ ಸರ್ಕಾರದಿಂದ ಬಂದಿಲ್ಲ. ಬಂದ ನಂತರ ಕಾಲೇಜು ಅಥವಾ ಕೋರ್ಸ್ ವಾರ ಸೀಟ್ ಮ್ಯಾಟ್ರಿಕ್ಸ್ ಅನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅದೇ ರೀತಿ ಕೋರ್ಸ್‌ಗಳ ಶುಲ್ಕ ನಿಗದಿ ಸಂಬಂಧ ಒಂದು ಸಭೆ ನಡೆದಿದ್ದು, ಸದ್ಯದಲ್ಲೇ ಆ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದರು.