Connect with us

ಕೆಸಿಎಫ್ ವತಿಯಿಂದ ಮೆಕ್ಕಾದಲ್ಲಿ ರಕ್ತದಾನ ಶಿಬಿರ

ಕೆಸಿಎಫ್ ವತಿಯಿಂದ ಮೆಕ್ಕಾದಲ್ಲಿ ರಕ್ತದಾನ ಶಿಬಿರ

ಸೌದಿ ಅರೇಬಿಯಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಡೇ ಪ್ರಯುಕ್ತ ಕೆಸಿಎಫ್ ಮಕ್ಕತುಲ್ ಮುಕರ್ರಮ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ ಮೆಕ್ಕಾದ ಝಾಹಿರ್ ನಲ್ಲಿರುವ ಕಿಂಗ್ ಅಬ್ದುಲ್ ಅಜೀಝ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಈ ಪವಿತ್ರ ಭೂಮಿಯಲ್ಲಿ ಉದ್ಯೋಗ ಮಾಡಲು ದೊರಕಿದ ಸದಾವಕಾಶವನ್ನು ಬಳಸಿ ಕೆಸಿಎಫ್ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಅತ್ಯಂತ ಮಹತ್ವ ಪೂರ್ಣವಾದ ಕಾರ್ಯಗಳನ್ನು ನಡೆಸುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ. ತಾಯ್ನಾಡಿನಲ್ಲೂ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಹಕರಿಸುತ್ತಾ ಅನಾಥ, ನಿರ್ಗತಿಕರ ಕಣ್ಣೀರೊರೆಸುವ ಕಾರ್ಯಗಳಲ್ಲಿ ಕೆಸಿಎಫ್ ಮುಂದಾಗಿದೆ ಎಂದರು.

ಅನ್ನದಾನ, ಶಿಕ್ಷಣ ಇವುಗಳಿಗಿಂತ ಅತ್ಯಂತ ಮಹತ್ವದ್ದಾಗಿದೆ ರಕ್ತದಾನ. ಅನ್ನವು ಸರ್ಕಾರದಿಂದಲೇ ದಾನವಾಗಿ ಲಭಿಸಿದರೆ ಶಿಕ್ಷಣ ಸೈಬರ್ ಕೇಂದ್ರಗಳಲ್ಲಿ ಹೇರಳವಾಗಿ ದೊರೆಯಬಹುದು. ಆದ್ರೆ ರಕ್ತವು ಈ ರೀತಿ ಲಭಿಸದು. ಆದ್ದರಿಂದ ರಕ್ತ ದಾನ ಅತ್ಯಂತ ಮಹತ್ವಪೂರ್ಣ ದಾನವಾಗಿದೆ. ಇದನ್ನು ಆಯೋಜಿಸಿದ ಕೆಸಿಎಫ್ ನಿಜಕ್ಕೂ ಅಭಿನಂದನಾರ್ಹ ಎಂದರು. ಇನ್ನು ಮುಂದಕ್ಕೂ ಕೆಸಿಎಫ್ ಮಾದರಿ ಯೋಗ್ಯ ಸಂಘಟನೆಯಾಗಿ ಬೆಳೆದು ಬರಲಿ ಎಂದು ಹಾರೈಸಿ ರಕ್ತ ತಪಾಸಣೆ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಬಳಿಕ ದಾರುಲ್ ಉಲೂಮ್ ರಹ್ಮಾನಿಯ ದಾವಣಗೆರೆ ಇದರ ಪ್ರಿನ್ಸಿಪಾಲ್ ಬಿ.ಎ ಇಬ್ರಾಹಿಮ್ ಸಖಾಫಿ ದಾವಣಗೆರೆ ಮಾತಾಡಿ, ಧಾರ್ಮಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿ ಹಿಂದುಳಿದ ಉತ್ತರ ಕರ್ನಾಟಕವನ್ನು ಪ್ರತೇಕವಾಗಿ ಗಮನವಿಟ್ಟು ಹಾಗೂ ಹಜ್ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಕಾರ್ಯಚರಿಸುತ್ತಾ ಬಂದಿರುವ ಕೆ.ಸಿ.ಎಫ್ ಎಂಬ ಸಂಘಟನೆಯನ್ನು ಬಿಟ್ಟು ಬೇರೆ ಯಾವ ಸಂಘಟನೆಯು ಕೊಲ್ಲಿ ರಾಷ್ಟ್ರದಲ್ಲಿ ಕಾಣಲು ಸಾಧ್ಯವಿಲ್ಲ, ಇಸ್ಲಾಮಿನಲ್ಲಿ ರಕ್ತವನ್ನು ಯಾವತ್ತೂ ವ್ಯಾಪಾರ ಮಾಡಬಾರದು. ಅದನ್ನು ದಾನವಾಗಿ ಕೊಡಬಹುದೆಂದು ನಮ್ಮ ಉಲಾಮಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿ ಕೆ.ಸಿ.ಎಫ್ ಸೇವೆಯನ್ನು ಅಭಿನಂದಿಸಿ ಶುಭ ಹಾರೈಸಿದರು.

ನಂತರ ಕೆಸಿಎಫ್ ಮೆಕ್ಕಾ ಸೆಕ್ಟರಿನ 20 ಕಾರ್ಯಕರ್ತರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ, ಕೋಶಾಧಿಕಾರಿ ಸುಲೈಮಾನ್ ಪಾದೆಕಲ್ಲು, ಶಿಕ್ಷಣ ವಿಭಾಗ ಕನ್ವೀನರ್ ಮುಸ್ತಾಕ್ ಸಾಗರ್, ಸಾಂತ್ವನ ವಿಭಾಗ ಕನ್ವೀನರ್ ಮೂಸಾ ಹಾಜಿ ಕಿನ್ಯ ಹಾಗೂ ಕೆ.ಸಿ.ಎಫ್ ಜಿದ್ದಾ ಝೋನ್ ಸಾರ್ವಜನಿಕ ಸಂಪರ್ಕ ಚೇರ್ಮನ್ ಇಬ್ರಾಹಿಮ್ ಕಿನ್ಯ ಹಾಗೂ ಕೆ.ಸಿ.ಎಫ್ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement