ಕಜಕಿಸ್ತಾನ: ತೈಲ ಬೆಲೆ ಏರಿಕೆ ಖಂಡಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕಜಕಿಸ್ತಾನ ಸರ್ಕಾರದ ಕ್ಯಾಬಿನೆಟ್ ರಾಜೀನಾಮೆ ನೀಡಿದೆ.
ತೈಲ ಉತ್ಪಾದನೆಯ ಮಧ್ಯ ಏಷ್ಯಾದ ದೇಶದಲ್ಲಿ ಇಂಧನ ಬೆಲೆ ಏರಿಕೆಯಾಗಿದೆ. ಇದನ್ನು ಖಂಡಿಸಿ ಜನರು ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಹಿಂಸಾಚಾರಕ್ಕೆ ಸಿಲುಕಿದ್ದು, 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆಯನ್ನು ನಿಯಂತ್ರಿಸಲಾಗದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು. ಅದಕ್ಕೂ ಬಗ್ಗದ ಜನತೆ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜೀನಾಮೆ ನೀಡಿದೆ. ಅಧ್ಯಕ್ಷ ಕಸ್ಸಿಮ್-ಜೊಮಾರ್ಟ್ ಟೊಕಾಯೆವ್ ಅವರು ಸರ್ಕಾರದ ರಾಜೀನಾಮೆ ಅಂಗೀಕರಿಸಿದ್ದಾರೆ. ಇದನ್ನೂ ಓದಿ: ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ದುರಂತಕ್ಕೆ ಪೈಲಟ್ ದೋಷವೇ ಕಾರಣ
ಬುಧವಾರ ಸರ್ಕಾರ ರಾಜೀನಾಮೆ ನೀಡಿದರೂ ಘರ್ಷಣೆ ನಿಂತಿಲ್ಲ. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿ ವಿಫಲವಾಗಿದೆ. ಕ್ಷಣ ಕ್ಷಣವೂ ಪ್ರತಿಭಟನೆ ಹಿಂಸಾತ್ಮಕವಾಗಿ ಪರಿಣಮಿಸುತ್ತಿದೆ. ಬ್ಯಾಂಕ್, ಅಂಗಡಿ, ರೆಸ್ಟೋರೆಂಟ್‌ಗಳ ಮೇಲೆ ದಾಳಿಯಾಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.
ಈ ವರ್ಷದ ಆರಂಭದಲ್ಲಿ ಸರ್ಕಾರವು ಎಲ್‌ಪಿಜಿ ಮೇಲಿನ ಬೆಲೆ ಹೆಚ್ಚಳ ಮಾಡಿದ್ದರಿಂದ ಪ್ರತಿಭಟನೆ ಶುರುವಾಯಿತು. ಎಲ್‌ಪಿಜಿ ಮೇಲಿನ ಬೆಲೆ ನಿಯಂತ್ರಣವನ್ನು ಮರುಸ್ಥಾಪಿಸಲು ಹಾಗೂ ಅದನ್ನು ಗ್ಯಾಸೋಲಿನ್, ಡೀಸೆಲ್ ಮತ್ತು ಇತರೆ ಗ್ರಾಹಕ ಸರಕುಗಳಿಗೆ ವಿಸ್ತರಿಸಲು ಪ್ರಾಂತೀಯ ಗವರ್ನರ್‌ಗಳಿಗೆ ಕಜಕಿಸ್ತಾನ ಅಧ್ಯಕ್ಷ ಆದೇಶಿಸಿದ್ದಾರೆ.
ಕಜಕಿಸ್ತಾನದ ದಕ್ಷಿಣದ ನಗರಗಳಾದ ಶೈಮ್ಕೆಂಟ್ ಮತ್ತು ತಾರಾಜ್‌ನಲ್ಲಿ ಮಂಗಳವಾರ ರಾತ್ರಿಯಿಡೀ ಸರ್ಕಾರಿ ಕಟ್ಟಡಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಈ ಘರ್ಷಣೆಯಲ್ಲಿ 95 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮೋದಿಗೆ ಭದ್ರತಾ ಲೋಪ – ಪಂಜಾಬ್ ತನ್ನ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ: ಬೊಮ್ಮಾಯಿ
2021ರಲ್ಲಿ ಎಲ್‌ಪಿಜಿ ಬೆಲೆ 1 ಲೀಟರ್‌ಗೆ 50 ಟೆಂಗೆ (ಅಂದಾಜು 8.53 ರೂಪಾಯಿ) ಇತ್ತು. ಈ ಬೆಲೆಯು ವರ್ಷದ ಕೊನೆಯಲ್ಲಿ 79-80 ಟೆಂಗೆಗೆ (ಅಂದಾಜು 13.64 ರೂಪಾಯಿ) ಏರಿಕೆಯಾಯಿತು. ನಂತರ 2022ರ ಆರಂಭದಲ್ಲಿ ಈ ಬೆಲೆ ಏಕಾಏಕಿ 120 ಟೆಂಗೆ (ಅಂದಾಜು 20.47 ರೂಪಾಯಿ)ಗೆ ಏರಿಕೆಯಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.