ಕೇವಲ ಒಂದೇ ಒಂದು ಹಿಟ್ ಸಿನಿಮಾ, ನಟಿ ಕಯಾದು ಲೋಹರ್ (Kayadu Lohar) ಅವರ ವೃತ್ತಿ ಜೀವನವನ್ನೇ ಬದಲಾಯಿಸಿದೆ. ತಮಿಳಿನ ʻಡ್ರ್ಯಾಗನ್ʼ (Dragon) ಚಿತ್ರ ಈ ಸುಂದರಿಯನ್ನು ರಾತ್ರೋರಾತ್ರಿ ತಾರೆಯನ್ನಾಗಿಸಿತು. ಈಗ ಸುಮಾರು ಆರು ಚಿತ್ರಗಳು ಅವರ ನಟನೆಯನ್ನು ಬಯಸಿ ಕ್ಯೂ ನಿಂತಿವೆ!
ಕಯಾದುಗೆ ಕಾಲಿವುಡ್‌ನಲ್ಲಿ ಮಾತ್ರವಲ್ಲ, ಟಾಲಿವುಡ್‌ನಲ್ಲೂ ಅದೃಷ್ಟದ ಬಾಗಿಲು ತೆರೆದಿದೆ. ಶ್ರೀ ವಿಷ್ಣು ಮತ್ತು ಅಲ್ಲೂರಿ ಚಿತ್ರಗಳ ಮೂಲಕ ತೆಲುಗು ಚಿತ್ರರಂಗಕ್ಕೆ (Telugu Cinima) ಪಾದಾರ್ಪಣೆ ಮಾಡಿದಾಗ ಇವರ ಕಡೆ ಯಾರೂ ಹೆಚ್ಚು ಗಮನ ಹರಿಸಿರಲಿಲ್ಲ. ಡ್ರ್ಯಾಗನ್ ಸೂಪರ್ ಹಿಟ್ ಆದ ನಂತರ ಕಯಾದು ಹಾಟ್ ಫೇವರಿಟ್ ಹೀರೋಯಿನ್ ಆಗಿದ್ದು, ತೆಲುಗು ಚಿತ್ರಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ನಟ ವಿಶ್ವಕ್ ಸೇನ್ ನಟನೆಯ ‘ಫಂಕಿ’ ಚಿತ್ರಕ್ಕೂ ಕಯಾದು ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.
ಜಿ.ವಿ. ಪ್ರಕಾಶ್ ಕುಮಾರ್ ಮತ್ತು ಕಯಾದು ಅಭಿನಯದ ಮುಂಬರುವ ಚಿತ್ರ ‘ಇಮ್ಮಾರ್ಟಲ್’ನ (Immortal) ಫಸ್ಟ್-ಲುಕ್ ಪೋಸ್ಟರ್ ಈಗಾಗಲೇ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಮರಿಯಪ್ಪನ್ ಚಿನ್ನಾ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರದ ಪೋಸ್ಟರ್ ಯುವ ಜನರನ್ನು ಆಕರ್ಷಿಸುತ್ತಿದೆ. ಈ ಪೋಸ್ಟರ್‌ನಲ್ಲೂ ʻಡ್ರ್ಯಾಗನ್ʼನ ಚಿತ್ರವಿದ್ದು, ನಟಿಯ ಯಶಸ್ಸಿನ ಛಾಯೇ ಎದ್ದು ಕಾಣುತ್ತಿದೆ.
ಸಧ್ಯ ತಮಿಳಿನಲ್ಲಿ ‘ಇದಯಂ ಮುರಳಿ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾ ಜೂನ್ ಇಲ್ಲವೇ ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇವುಗಳ ಜೊತೆಗೆ ಇನ್ನೂ ಆರು ಚಿತ್ರಗಳಲ್ಲಿ ನಟಿಸಲು ಕಯಾದು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
2021ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ‘ಮುಗಿಲ್‌ಪೇಟೆ’ ಚಿತ್ರದಲ್ಲಿ ಕಯಾದು ನಾಯಕಿಯಾಗಿ ನಟಿಸಿದ್ದರು.