ವಿಲನ್ ಕೊಟ್ಟ ಟಾಸ್ಕ್‌ನಲ್ಲಿ ಗಿಲ್ಲಿ ಗೆದ್ದಂತೆ ಕಾಣ್ತಿದೆ. ಕೊನೆಗೂ ಕಾವ್ಯ ಕಣ್ಣಲ್ಲಿ ಕಣ್ಣೀರು ಬರುವಂತೆ ಮಾಡಿದ್ದಾರೆ. ತನ್ನ ಬಗ್ಗೆ ಗಿಲ್ಲಿ ಆಡಿದ ಮಾತನ್ನು ನೆನೆದು ‘ಕಾವು’ ಕಣ್ಣೀರಿಟ್ಟಿದ್ದಾರೆ.
ಬಿಗ್ ಬಾಸ್ ಮನೆಗೆ ವಿಲನ್ ಎಂಟ್ರಿ ಕೊಟ್ಟಾಗಿನಿಂದ ಸ್ಪರ್ಧಿಗಳ ವರಸೆಯೇ ಬದಲಾಗಿದೆ. ಊಹಿಸಲಾಗದಂತಹ ಬದಲಾವಣೆಗಳು ಮನೆಯಲ್ಲಿ ಕಂಡುಬರುತ್ತಿವೆ. ಬಿಗ್ ಬಾಸ್ ಮನೆಯ ಫೇಮಸ್ ಜೋಡಿ ಗಿಲ್ಲಿ-ಕಾವು ನಡುವೆ ಬಿರುಕು ಮೂಡಿಸಿದ್ದಾರೆ ವಿಲನ್. ಕಾವ್ಯ ಅಳುವಂತೆ ಮಾಡ್ಬೇಕು ಅಂತ ಗಿಲ್ಲಿಗೆ ವಿಲನ್ ಟಾಸ್ಕ್ ಕೊಟ್ಟಿದ್ದರು. ಅದರಲ್ಲಿ ಗಿಲ್ಲಿ ಗೆದ್ದಂತೆ ಕಾಣ್ತಿದೆ. ಈ ಸನ್ನಿವೇಶದ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿದೆ.
ಮನೆಯಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡಲಾರದಷ್ಟು ಹತ್ತಿರವಾಗಿದ್ದರು ಗಿಲ್ಲಿ-ಕಾವ್ಯ. ಇತರೆ ಸ್ಪರ್ಧಿಗಳು ಎಷ್ಟೇ ಟಾಂಟ್ ಮಾಡಿದ್ರೂ ಇಬ್ಬರೂ ಡೋಂಟ್ ಕೇರ್ ಎನ್ನುತ್ತಿದ್ದರು. ಆದ್ರೆ, ಮನೆಗೆ ವಿಲನ್ ಬಂದಾಗಿನಿಂದ ಪರಿಸ್ಥಿತಿ ಉಲ್ಟಾ ಆಗಿದೆ. ಮೊಟ್ಟ ಮೊದಲ ಬಾರಿಗೆ ಗಿಲ್ಲಿಯನ್ನು ಕಾವ್ಯ ನಾಮಿನೇಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಆಗಿನಿಂದ ಗಿಲ್ಲಿ ‘ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಟ್ರಲ್ಲ.. ಬೆನ್ನಿಗೆ ಚೂರಿ ಹಾಕಿದ್ರಲ್ಲ’ ಅಂತ ಬೇರೆಯವರನ್ನು ಮುಂದಿಟ್ಟುಕೊಂಡು ಕಾವ್ಯಗೆ ಟಾಂಗ್ ಕೊಡ್ತಿದ್ದರು.
ಲಕ್ಷುರಿ ಬಜೆಟ್ ಕಳ್ಕೊಂಡಿದ್ದ ಮನೆಮಂದಿಗೆ ವಿಲನ್ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಸ್ಪೆಷಲ್ ಊಟಕ್ಕಾಗಿ ಚಿಕನ್, ಮಟನ್, ಮಸಾಲೆ ಐಟಮ್ಸ್ ಕಳಿಸಿಕೊಟ್ಟಿದ್ದಾರೆ. ಇದನ್ನು ಪಡೆದುಕೊಳ್ಳಲು ಸಹ ಗಿಲ್ಲಿ-ಅಶ್ವಿನಿಗೆ ಒಂದು ಟಾಸ್ಕ್ ಕೊಟ್ಟರು. ಇವರಿಬ್ಬರೇ ಸೇರಿಕೊಂಡು ಅಡುಗೆ ಮಾಡಿ ಮನೆಮಂದಿಗೆ ಸ್ಪೆಷಲ್ ಊಟ ಬಡಿಸಬೇಕು ಅನ್ನೋದೆ ಟಾಸ್ಕ್. ಗಿಲ್ಲಿಗೆ ಅಡುಗೆ ಬರಲ್ಲ, ಅಶ್ವಿನಿ ನಾನ್‌ವೆಜ್ ತಿನ್ನಲ್ಲ. ಹೀಗಿದ್ದಾಗ ಇವರಿಬ್ಬರೇ ಹೇಗೆ ನಾನ್‌ವೆಜ್ ಅಡುಗೆ ಮಾಡ್ತಾರೆ ಅನ್ನೋದು ಪ್ರಶ್ನೆಯಾಗಿತ್ತು. ಇಬ್ಬರೂ ಇಲ್ಲ ಅಂದ್ರೆ ಉಳಿದವರಿಗೆ ನಷ್ಟ ಆಗುತ್ತೆ ಅಂತ ಅಶ್ವಿನಿ ದೊಡ್ಡ ಮನಸ್ಸು ಮಾಡಿದ್ರು. ನಾವಿಬ್ಬರೇ ಅಡುಗೆ ಮಾಡಿ ಎಲ್ಲರಿಗೂ ಊಟ ಮಾಡಿಸೋಣ ಅಂತ ಗಿಲ್ಲಿಯನ್ನು ಒಪ್ಪಿಸಿದ್ರು. ಇವರಿಗೆ ಅಸಿಸ್ಟೆಂಟ್ ಆಗಿ ರಜತ್ ಆಯ್ಕೆಗೆ ವಿಲನ್ ಒಪ್ಪಿಗೆ ಸೂಚಿಸಿದ್ರು.
ಇದರ ಜೊತೆಗೆ ಗಿಲ್ಲಿ-ಅಶ್ವಿನಿಗೆ ವಿಲನ್ ಮತ್ತೊಂದು ಟಾಸ್ಕ್ ಜೊತೆಗೆ ಶಾಕ್ ಕೊಟ್ಟರು. ಕಾವ್ಯ ಕಣ್ಣೀರಿಡುವಂತೆ ನೀವು ಮಾಡ್ಬೇಕು ಅನ್ನೋದೇ ಟಾಸ್ಕ್. ಈ ಟಾಸ್ಕ್ ಗಿಲ್ಲಿಗೆ ಇಷ್ಟ ಇರಲಿಲ್ಲ. ತುಂಬಾ ಯೋಚನೆ ಮಾಡಿ ಕೊನೆಗೆ ಒಪ್ಪಿಗೆ ಸೂಚಿಸಿದ್ರು. ಮನಸ್ಸಿಗೆ ನಾಟುವಂತಹ ಮಾತುಗಳನ್ನಾಡಿ ಕಾವ್ಯ ಕಣ್ಣಲ್ಲಿ ಕಣ್ಣೀರು ತರಿಸಿದ್ದಾರೆ ಗಿಲ್ಲಿ. ಮುಂದೇನಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

