-ನಿಮ್ಮ ಕಣ್ಣಿಗೆ ಭಗವಂತ ಕಾಣಲ್ಲ, ನನಗೆ ಕಾಣಿಸ್ತಾನೆ
ಕಾರವಾರ: ದೇವರು ಮೈಮೇಲೆ ಬರುತ್ತೆಂದು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದ ಶಿಕ್ಷಕ ಇಂದು ಬಿಇಓ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾವಲಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಹ್ಲಾದ್ ಕ್ಷಮೆ ಕೇಳಿದ್ದಾನೆ. ತನಗೆ ದೇವರು ಮೈಮೇಲೆ ಬರುತ್ತದೆ ಎನ್ನುವ ಕಾರಣ ಮಕ್ಕಳ ಮೈ ಮೇಲೆ ನಿಂಬೆಹಣ್ಣುಗಳನ್ನು ಎಸೆಯುತ್ತಿದ್ದನು. ದೇವರು ಮೈಮೇಲೆ ಬಂದಿದೆ ಎಂದು ಶಾಲೆಯಲ್ಲಿಯೇ ವಿಚಿತ್ರವಾಗಿ ವರ್ತಿಸುತ್ತಿದ್ದರಿಂದ ಮಕ್ಕಳು ಭಯಪಟ್ಟು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದರು.
ಶಿಕ್ಷಕನ ವರ್ತನೆಯ ಬಗ್ಗೆ ಪೋಷಕರು ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿದ್ದ ಮುಂಡಗೋಡ ಬಿಇಓ ಬಸವರಾಜ್ ಯಾವುದೇ ಮುನ್ಸೂಚನೆ ನೀಡದೇ ಶಾಲೆಗೆ ಭೇಟಿ ನೀಡಿದ್ದರು. ಈ ಶಾಲೆಯಲ್ಲಿಯೇ ಭಗವಂತನಿದ್ದಾನೆ. ಇಲ್ಲಿಯೂ ಭಗವಂತನಿದ್ದು, ನನ್ನ ಕಣ್ಣಿಗೆ ಕಾಣಿಸುತ್ತಿದ್ದಾನೆ. ಆದ್ರೆ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವಲ್ಲ. ಕೊನೆಗೆ ಶಿಕ್ಷಕ ಪ್ರಹ್ಲಾದ್ ತಪ್ಪೊಪ್ಪಿಕೊಂಡು ಬಿಇಓ ಕಾಲಿಗೆ ನಮಸ್ಕರಿಸಿ ಕ್ಷಮೆ ಕೇಳಿದ್ದಾನೆ.