-ರಥದ ಮಾದರಿಯಲ್ಲಿ ಕಟ್ಟಿಗೆ ಜೋಡಣೆ
ಉಡುಪಿ: ಅನ್ನಬ್ರಹ್ಮನ ಕ್ಷೇತ್ರ, ಮುರುಳೀ ಲೋಲನ ನಾಡು ಉಡುಪಿ ಅದಮಾರು ಪರ್ಯಾಯಕ್ಕೆ ಸಿದ್ಧಗೊಳ್ಳುತ್ತಿದೆ. ಪರ್ಯಾಯ ಮಹೋತ್ಸವಕ್ಕೆ ಮುಂಚಿತವಾಗಿ ನಡೆಯುವ ಕಟ್ಟಿಗೆ ಮಹೂರ್ತ ಇಂದು ನೆರವೇರಿದ್ದು, ಪೂಜಿಸಲ್ಪಡುವ ಕಟ್ಟಿಗೆಯ ಕಟ್ಟುಗಳನ್ನು ಸಿಂಗಾರ ಮಾಡಿ ಮೆರವಣಿಗೆ ಮಾಡಲಾಯಿತು.
ಶ್ರೀಕೃಷ್ಣ ಮಠಕ್ಕೆ ಬರುವ ಭಕ್ತರ ಅನ್ನಪ್ರಸಾದ ತಯಾರಿಸುವ ಸಲುವಾಗಿ ಕಟ್ಟಿಗೆ ಸಂಗ್ರಹ ಕಾರ್ಯಕ್ಕೆ ಈ ಮೂಲಕ ಚಾಲನೆ ಸಿಕ್ಕಿದ್ದು, ಕಟ್ಟಿಗೆಯನ್ನು ರಥದ ಮಾದರಿಯಲ್ಲಿ ಜೋಡಿಸುವುದೇ ಈ ಮಹೂರ್ತದ ವಿಶೇಷವಾಗಿದೆ. ಬಿರುದು ಬಾವಲಿಗಳೊಂದಿಗೆ ಹೊರಟ ಮೆರವಣಿಗೆ ಕೃಷ್ಣಮಠ, ಅನಂತೇಶ್ವರ ದೇವಸ್ಥಾನ, ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸಾಗಿಬಂದ ಬಳಿಕ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಧ್ವ ಸರೋವರದ ಪಕ್ಕ ಕಟ್ಟಿಗೆಗಳನ್ನು ಜೋಡಿಸಿ ರಥ ನಿರ್ಮಾಣ ಮಾಡಲಾಗುತ್ತದೆ.
ವಾಸುದೇವ ಆಚಾರ್ಯರು ಆಸ್ಥಾನ ಪುರೋಹಿತರಾಗಿದ್ದು, ಇಂದಿನ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕೃಷ್ಣಮಠ, ಅನಂತೇಶ್ವರ, ಚಂದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿ ಕಟ್ಟಿಗೆ ಮಹೂರ್ತ ಮಾಡಿದ್ದೇವೆ. ಮಠದ ಭಕ್ತರು ಸಾರ್ವಜನಿಕರು ಪಾಲ್ಗೊಂಡು ಸಂಭ್ರಮದ ಆಚರಣೆ ಮಾಡಿದ್ದೇವೆ ಎಂದು ಆಚಾರ್ಯರು ಹೇಳಿದರು.
800 ವರ್ಷಗಳ ಇತಿಹಾಸವಿರುವ ಉಡುಪಿ ಕೃಷ್ಣಮಠದಲ್ಲಿ ಈ ಸಂಪ್ರದಾಯ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಮುಂದಿನ ಜನವರಿಯಲ್ಲಿ ಈಗಿನ ಪರ್ಯಾಯ ಪಲಿಮಾರು ಸ್ವಾಮೀಜಿಯವರ ಕೃಷ್ಣನ ಪೂಜಾಧಿಕಾರ ಕೊನೆಗೊಳ್ಳಲಿದೆ. ಬಳಿಕ ಅದಮಾರು ಮಠಕ್ಕೆ ಪೂಜಾಧಿಕಾರ ಹಸ್ತಾಂತರವಾಗಲಿದೆ. ಈ ಹಿಂದೆ ಮಠದಲ್ಲಿ ಆರ್ಥಿಕ ಸಂಕಷ್ಟ ಇರುವಾಗ ಕಟ್ಟಿಗೆಯನ್ನು ಭಕ್ತರಿಂದ ಸಂಗ್ರಹ ಮಾಡಲಾಗುತ್ತಿತ್ತು. ಮನೆಗಳಿಂದ ಭಕ್ತರು ಸ್ವಲ್ಪ ಸ್ವಲ್ಪ ನೀಡುತ್ತಿದ್ದ ಕಟ್ಟಿಗೆಯನ್ನೇ ಸಂಗ್ರಹ ಮಾಡಲಾಗುತ್ತಿತ್ತು. ಆ ಕಟ್ಟಿಗೆಯನ್ನು ಮಠದ ಅನ್ನದಾನಕ್ಕಾಗಿ ಉಪಯೋಗ ಮಾಡಲಾಗುತ್ತಿತ್ತು. ಸಂಗ್ರಹವಾದ ಕಟ್ಟಿಗೆಯಲ್ಲಿ ರಥ ನಿರ್ಮಾಣ ಮಾಡಿ ಎರಡು ವರ್ಷಗಳ ಕಾಲ ಇಡಲಾಗುತ್ತದೆ. ಅಲ್ಲದೆ ಅದರಿಂದಲೇ ಕಟ್ಟಿಗೆ ತೆಗೆದು ಅನ್ನಪ್ರಸಾದ ಸಿದ್ಧ ಮಾಡಲಾಗುತ್ತದೆ.
ಈ ಬಗ್ಗೆ ಮಠದ ಮ್ಯಾನೇಜರ್ ಗೋವಿಂದರಾಜ್ ಮಾತನಾಡಿ, 2020-22ರ ಅವಧಿಯಲ್ಲಿ ಅದಮಾರು ಮಠದ ಪರ್ಯಾಯ ನಡೆಯಲಿದೆ. ಮಠ ಸಮಾಜದಲ್ಲಿ ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ತೊಡಗಿಸಿಕೊಂಡಿದೆ. ದೇವತಾ ಚಿಂತನೆಯೊಂದಿಗೆ ನೆರವೇರಿದೆ. ಇಬ್ಬರು ಮಠಾಧೀಶರ ಸೂಚನೆಯಂತೆ ಎಲ್ಲಾ ಧಾರ್ಮಿಕ ವಿಧಿ ವಿಧಾನ ನಡೆಯಲಿದೆ ಎಂದು ತಿಳಿಸಿದರು.
ಈಗಾಗಲೇ ಬಾಳೆ ಮಹೂರ್ತ ಮತ್ತು ಅಕ್ಕಿ ಮಹೂರ್ತದ ವಿಧಿ ವಿಧಾನಗಳು ಮುಕ್ತಾಯಗೊಂಡಿದೆ. ಹಾಗೆಯೇ ಅದಮಾರು ಮಠದ ಹಿರಿಯ ಮತ್ತು ಕಿರಿಯ ಶ್ರೀಗಳು ಲೋಕಸಂಚಾರದಲ್ಲಿದ್ದಾರೆ. ಹೀಗಾಗಿ ಪುರಪ್ರವೇಶದ ಸಂದರ್ಭದಲ್ಲಿ ಅವರು ಉಡುಪಿಗೆ ಆಗಮಿಸಲಿದ್ದಾರೆ. ಕಟ್ಟಿಗೆ ಮಹೂರ್ತದ ನಂತರ ಧಾನ್ಯ ಮತ್ತು ಚಪ್ಪರ ಮಹೂರ್ತಗಳು ನಡೆಯಲಿದ್ದು, ಐದು ಮಹೂರ್ತಗಳು ಕೊನೆಗೊಳ್ಳುವಾಗ ಪರ್ಯಾಯ ಮಹೋತ್ಸವ ನೇರವೇರಲಿದೆ.