ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುತ್ತೇವೆ. ಆ ಅಭ್ಯರ್ಥಿ ರಾಮನಗರ ಜಿಲ್ಲೆಯವರೇ ಆಗಿರುತ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.
ನಗರದಲ್ಲಿ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್‍ಮಟ್ಟದ ಕಾರ್ಯಕರ್ತರ, ಮುಖಂಡರ ಸಭೆಯ ಬಳಿಕ ಮಾತನಾಡಿದ ಮಾಜಿ ಸಚಿವರು, ಜೆಡಿಎಸ್‍ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನವಿದೆ. ಜೆಡಿಎಸ್‍ಗೆ ಬಿಟ್ಟುಕೊಟ್ಟ 8 ಕ್ಷೇತ್ರಗಳಲ್ಲೂ ಕಾಂಗ್ರೆಸ್‍ನ ಸ್ಥಳೀಯ ಮುಖಂಡರು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಕೆಲವು ಕಡೆ ಅಭ್ಯರ್ಥಿಗಳೇ ಇಲ್ಲ. ಮತ್ತೆ ಕೆಲವು ಕಡೆ ಹೊಂದಾಣಿಕೆಯೇ ಇಲ್ಲ ಎಂದು ಲೇವಡಿ ಮಾಡಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಅಭ್ಯರ್ಥಿಯೇ ಇಲ್ಲ. ತುಮಕೂರನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದಕ್ಕೆ ಕಾಂಗ್ರೆಸ್‍ನ ವಿರೋಧ ವ್ಯಕ್ತವಾಗಿದೆ. ರಾಜ್ಯಕ್ಕೆ ಭೇಟಿ ನೀಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕಾಂಗ್ರೆಸ್-ಜೆಡಿಎಸ್ ದೋಸ್ತಿಯು 13 ಸೀಟಿಗಿಂತ ಹೆಚ್ಚು ಗೆಲ್ಲಲ್ಲ ಎಂದು ಈಗಾಗಲೇ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರಂತೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಯೇ ಹೆಚ್ಚು ಕ್ಷೇತ್ರದಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಿ ಬಿಡುಗಡೆಗೂ ಮುನ್ನ ನಾನೇ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ತಮಗೆ ಸಾಕಷ್ಟು ಕಹಿ ಅನುಭವವಾಗಿದೆ. ಹೀಗಾಗಿ ಪಕ್ಷದ ವರಿಷ್ಠರು ಇಂದು ಸಾಯಂಕಾಲ ಇಲ್ಲವೇ ನಾಳೆ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ಮಾತನಾಡಿ, ದೇಶದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು, ದೇಶವನ್ನು ಮುನ್ನಡೆಸಲು ಅವರೇ ಸಮರ್ಥ ವ್ಯಕ್ತಿ ಎಂದು ಯುವಜನತೆ ಬಯಸುತ್ತಿದ್ದಾರೆ ಎಂದ ಅವರು, ಪಕ್ಷ ಟಿಕೆಟ್ ಯಾರಿಗೆ ಕೊಡುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಪಟ್ಟಿಬಿಡುಗಡೆಯಾದ ಮೇಲೆ ಯಾರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ತಿಳಿಯುತ್ತದೆ ಎಂದರು.