– ಆರೋಪಿಗೆ ಸಹಕರಿಸಿದ್ದ ಮೂವರಿಗೆ 5 ವರ್ಷ ಜೈಲು
ನವದೆಹಲಿ: ಜಮ್ಮು-ಕಾಶ್ಮೀರದ ಕುಥುವಾ ಪ್ರದೇಶದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ. ಜೊತೆಗೆ ಆರೋಪಿಗಳಿಗೆ ಸಹಕರಿಸಿದ್ದ ಮೂವರಿಗೆ 5 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಿದೆ.
ಈ ಪ್ರಕರಣದ ಕುರಿತು ಪಂಜಾಬ್‍ನ ಪಠಾಣ್‍ಕೋಟ್ ನ್ಯಾಯಾಲಯವು ಇಂದು ವಿಚಾರಣೆ ನಡೆಸಿತ್ತು. 8 ಜನ ಆರೋಪಿಗಳ ಪೈಕಿ 6 ಜನರ ವಿರುದ್ಧ ಆರೋಪ ಸಾಬೀತಾಗಿತ್ತು. ಹೀಗಾಗಿ ಆರು ಜನರು ದೋಷಿಗಳು ಎಂದು ತೀರ್ಪು ನೀಡಿದ್ದ ಕೋರ್ಟ್, ಶಿಕ್ಷೆಯನ್ನು ಕಾಯ್ದಿರಿಸಿತ್ತು. ಈಗ ಕೋರ್ಟ್ ತೀರ್ಪು ಪ್ರಕಟಿಸಿದೆ.
Kathua rape and murder case: Tilak Raj, Anand Dutt and Surinder Kumar have been convicted for destruction of evidence. They have been given 5 years of imprisonment each. https://t.co/Wnmc4tdZ1M
— ANI (@ANI) June 10, 2019
ಕಥುವಾ ಜಿಲ್ಲೆಯ ಸಂಜಿ ರಾಮ್, ಪರ್ವೇಶ್ ಕುಮಾರ್ ಮತ್ತು ದೀಪಕ್ ಖಜುರಿಯಾ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳು. ಉಳಿದಂತೆ ಆರೋಪಿಗಳಿಗೆ ಸಹಕರಿಸಿದ್ದ ತಿಲಕ್ ರಾಜ್, ಆನಂದ್ ದತ್ತ ಮತ್ತು ಸುರೀಂದರ್ ಕುಮಾರ್ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಏಳು ಆರೋಪಿಗಳ ಪೈಕಿ ವಿಶಾಲ್‍ನನ್ನು ಪ್ರಕರಣದಿಂದ ಕೈ ಬಿಡಲಾಗಿದೆ.
ಏನಿದು ಪ್ರಕರಣ?:
ಸಂಜೀ ರಾಮ್ ಹಾಗೂ ಆತನ ಗುಂಪು ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನೆಲೆಸಿದ್ದ ಅಲ್ಪಸಂಖ್ಯಾತ ಅಲೆಮಾರಿಗಳನ್ನು ತೆರುವುಗೊಳಿಸಲು ಷಡ್ಯಂತ್ರ ರೂಪಿಸಿತ್ತು. ಹೀಗಾಗಿ ಜಿಲ್ಲೆಯ 8 ವರ್ಷದ ಬಾಲಕಿ ಕುದುರೆಗೆ ಮೇವು ತಿನ್ನಿಸಲು ಮನೆಯಿಂದ ಹೊರ ಹೋಗಿದ್ದಾಗ ಆಕೆಯನ್ನು ಅಪಹರಿಸಿದ್ದರು. ಬಾಲಕಿಯನ್ನು ದೇವಾಲಯದಲ್ಲಿ ಇರಿಸಿ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.
ಬಾಲಕಿ ಅಪಹರಣವಾದ ಮೂರು ದಿನಗಳ ನಂತರ ಆಕೆಯ ಮೃತ ದೇಹ ದೇವಾಲಯದ ಬಳಿ ಪತ್ತೆಯಾಗಿತ್ತು. ಈ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶದಲ್ಲಿ ವಿವಿಧೆಡೆ ಪ್ರತಿಭಟನೆ ನಡೆಸಿ, ಬಾಲಕಿ ಸಾವಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಮಗಳನ್ನು ಕಳೆದುಕೊಂಡ ಪೋಷಕರು, ನಾವು ಜೀವ ಬೆದರಿಕೆ ಎದುರಿಸುತ್ತಿದ್ದೇವೆ. ಇಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ದೂರು ನೀಡಿದ್ದರು.
ಮೃತ ಬಾಲಕಿಯ ಪೋಷಕರ ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಜಮ್ಮು-ಕಾಶ್ಮೀರದಿಂದ 30 ಕಿ.ಮೀ ದೂರ ವಿರುವ ಪಂಜಾಬ್ ಪ್ರಾಂತ್ಯದ ಪಠಾಣ್‍ಕೋಟ್‍ಗೆ ಹಸ್ತಾಂತರಿಸಿತ್ತು. ಅಷ್ಟೇ ಅಲ್ಲದೆ ಪ್ರತಿದಿನ ವಿಡಿಯೋ ಕ್ಯಾಮೆರಾ ಮೂಲಕ ವಿಚಾರಣೆ ನಡೆಸಿ ಶೀಘ್ರದಲ್ಲಿ ತೀರ್ಪು ನೀಡಬೇಕು ಎಂದು ಸೂಚಿಸಿತ್ತು.