ಶ್ರೀದೇವಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮ ಚಿತ್ರ ಡಿಸೆಂಬರ್ 6ನೇ ತಾರೀಕಿನಂದು ತೆರೆ ಕಾಣಲಿದೆ. ಒಂದು ಕಥೆಯ ಸೂತ್ರ ಹಿಡಿದು ಒಂದು ಸಿನಿಮಾವನ್ನು ಸಮರ್ಥವಾಗಿ ನಿರ್ದೇಶನ ಮಾಡೋವಷ್ಟರಲ್ಲಿ ಹೈರಾಣಾಗಬೇಕಾಗುತ್ತದೆ. ಅಂಥದ್ದರಲ್ಲಿ ಏಳು ಕಥೆ, ಏಳು ಮಂದಿ ನಿರ್ದೇಶಕರು, ಏಳು ಜನ ಛಾಯಾಗ್ರಾಹಕರು ಮತ್ತು ಅಷ್ಟೇ ಸಂಖ್ಯೆಯ ಸಂಗೀತ ನಿರ್ದೇಶಕರ ದೊಡ್ಡ ತಂಡವನ್ನು ಸಂಭಾಳಿಸುತ್ತಾ ಚೆಂದದ ಚಿತ್ರ ಕಟ್ಟಿ ಕೊಡೋದು ಕಷ್ಟದ ಕೆಲಸ. ಆದರೆ ಅದನ್ನು ರಿಷಬ್ ಶೆಟ್ಟಿ ಮತ್ತವರ ತಂಡ ಇಷ್ಟಪಟ್ಟು ಮಾಡಿದೆ. ಆದ್ದರಿಂದಲೇ ಬಿಡುಗಡೆಯ ಕಡೆಯ ಕ್ಷಣಗಳೆಲ್ಲ ಗೆಲುವಿನ ಸೂಚನೆಗಳಿಂದಲೇ ಕಳೆಗಟ್ಟಿಕೊಂಡಿವೆ.
Advertisement
ಇಂಥಾ ಮಹಾ ಕನಸುಗಳು ಹುಟ್ಟು ಪಡೆಯುವ ರೀತಿಯೂ ಒಂದು ಸಿನಿಮಾದಷ್ಟೇ ಸುಂದರವಾಗಿರುತ್ತವೆ. ಕಥಾ ಸಂಗಮವೆಂಬ ಕನಸು ಊಟೆಯೊಡೆದ ಕ್ಷಣಗಳ ಬಗ್ಗೆ ರಿಷಬ್ ಶೆಟ್ಟಿ ಕೂಡಾ ಒಂದಷ್ಟು ವಿಚಾರಗಳನ್ನು ನೆನಪಿಸಿಕೊಳ್ಳುತ್ತಾರೆ. ಸದಾ ಏನಾದರೊಂದು ಹೊಸತು ಸೃಷ್ಟಿಸಬೇಕೆಂಬ ಹಂಬಲ ಹೊಂದಿರೋ ರಿಷಬ್ ಶೆಟ್ಟರ ಪಾಲಿಗೆ ಪುಟ್ಟಣ್ಣ ಕಣಗಾಲ್ ರೋಲ್ ಮಾಡೆಲ್. ತಂತ್ರಜ್ಞಾನವೂ ಸೇರಿದಂತೆ ಏನೆಂದರೆ ಏನೂ ಇಲ್ಲದಿದ್ದ ಕಾಲದಲ್ಲಿಯೇ ಕಣಗಾಲರು ಸೃಷ್ಟಿಸಿದ್ದ ಅಚ್ಚರಿಗಳೇನು ಕಡಿಮೆಯವುಗಳಾ? ಅಂಥಾದ್ದೇ ಹೊಸ ಸೃಷ್ಟಿಯನ್ನು ಮಾಡಬೇಕೆಂಬ ಹಂಬಲದಲ್ಲಿಯೇ ರಿಷಬ್‍ರೊಳಗೆ ಮತ್ತೊಂದು ಕಥಾ ಸಂಗಮದ ಕನಸು ಊಟೆಯೊಡೆದಿತ್ತಂತೆ.
Advertisement
Advertisement
ವರ್ಷಾಂತರಗಳ ಹಿಂದೆ ರಂಗಿತರಂಗದಂಥಾ ಚಿತ್ರ ಕೊಟ್ಟಿದ್ದ ನಿರ್ಮಾಪಕ ಹೆಚ್.ಕೆ ಪ್ರಕಾಶ್‍ರೊಂದಿಗೆ ರಿಷಬ್ ಶೆಟ್ಟರ ಅಚಾನಕ್ ಭೇಟಿ ಸಂಭವಿಸಿತ್ತು. ಇಂಥಾ ಭೇಟಿಗಳೆಲ್ಲ ರಿಷಬ್ ಪಾಲಿಗೆ ಸಿನಿಮಾ ಕನಸಿಗೆ ಕಾವು ಕೊಡುವ ಸಂದರ್ಭಗಳಷ್ಟೇ. ಸಿನಿಮಾ ಬಿಟ್ಟರೆ ಬೇರ್ಯಾವ ಚರ್ಚೆಗಳೂ ಇಂಥಾ ಬೇಟಿಗಳಲ್ಲಿ ಹುಟ್ಟಿಕೊಳ್ಳುವುದಿಲ್ಲ. ಅದಕ್ಕೆ ಸರಿಯಾಗಿ ಅಂದೂ ಕೂಡಾ ಕಥಾ ಸಂಗಮದ ಪರಿಕಲ್ಪನೆಯನ್ನು ನಿರ್ಮಾಪಕ ಹೆಚ್.ಕೆ ಪ್ರಕಾಶ್ ಅವರ ಮುಂದೆ ಹೇಳಿಕೊಂಡಿದ್ದರಂತೆ. ಅದರಿಂದ ಇಂಪ್ರೆಸ್ ಆಗಿದ್ದ ಪ್ರಕಾಶ್ ತನ್ನ ಸ್ನೇಹಿತ ಪ್ರದೀಪ್ ಎನ್ ಆರ್ ಅವರ ಜೊತೆಗೂಡಿ ಈ ಸಿನಿಮಾ ನಿರ್ಮಾಣ ಮಾಡೋದಾಗಿ ಹೇಳಿದ್ದರಂತೆ. ಆ ನಂತರದಲ್ಲಿ ಏಳು ಮಂದಿ ಪ್ರತಿಭಾವಂತ ನಿರ್ದೇಶಕರನ್ನು ಹುಡುಕಿ, ಕಥೆಗಳನ್ನು ಕಲೆ ಹಾಕಿ ಕಡೆಗೂ ಕನಸಿನ ಕಥಾ ಸಂಗಮವನ್ನು ಅಣಿಗೊಳಿಸಿದ್ದಾರೆ. ಇದು ಇದೇ ಡಿಸೆಂಬರ್ 6ರಂದು ತೆರೆಗಾಣಲಿದೆ.