ಮಂಗಳೂರು: ಪುಣ್ಯಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು.
ಮನದ ಇಷ್ಟಾರ್ಥ ನೆರವೇರಿಸುವ ಭ್ರಮರಾಂಭಿಕೆ ಬ್ರಹ್ಮಕಲಶೋತ್ಸವ ಅಂಗವಾಗಿ ಜನವರಿ 22ರಿಂದ ಕಟೀಲು ಕ್ಷೇತ್ರದಲ್ಲಿ ವಿಶೇಷ ಪೂಜೆಗಳು ನಡೆದವು. ಇಂದು ಬೆಳಗ್ಗೆ 5 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಆರಂಭಗೊಂಡು ಬೆಳಗ್ಗೆ 9:37ಕ್ಕೆ ಮೀನ ಲಗ್ನದಲ್ಲಿ ಶ್ರೀ ದೇವಿಗೆ ಬಹ್ಮಕಲಶಾಭಿಷೇಕ ನೆರವೇರಿತು. ಈ ದೃಶ್ಯವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಬಳಿಕ ಅವಸ್ರುತಬಲಿ ಮಹಾಪೂಜೆ, ಪಲ್ಲಪೂಜೆ ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Advertisement
Advertisement
ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ವಿಶೇಷ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಲಕ್ಷಾಂತರ ಭಕ್ತರು ದೇವರ ಪ್ರಸಾದ ಸ್ವೀಕರಿಸಿದ್ದರು. ಅಷ್ಟೇ ಅಲ್ಲದೆ ಭಕ್ತರ ಬಾಯಾರಿಕೆ ನೀಗಿಸಲು ಪಾನಕ, ಕಲ್ಲಂಗಡಿ ಹಣ್ಣುಗಳನ್ನು ನೀಡಲಾಗುತ್ತಿದೆ.
Advertisement
ವಿವಿಧ ಭಾಗದಿಂದ ಬರುವ ಭಕ್ತರ ವಾಹನಗಳ ಪಾರ್ಕಿಂಗ್‍ಗೆ 35 ಎಕರೆ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. 600ಕ್ಕೂ ಮೀರಿ ಸ್ವಯಂಸೇವಕರು ಪಾರ್ಕಿಂಗ್‍ನಲ್ಲಿ ಹಾಗೂ ಇತರ ಕಡೆ ಸಾವಿರಕ್ಕೂ ಅಧಿಕ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬ್ರಹ್ಮಕಲಶೋತ್ಸವದ ವಿಶೇಷ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಫೆಬ್ರವರಿ 3ರವರೆಗೆ ನಡೆಯಲಿದ್ದು, ಫೆಬ್ರವರಿ 1ರಂದು ನಾಗಮಂಡಲ, ಫೆಬ್ರವರಿ 2ರಂದು ಕೋಟಿಜಪ ಯಜ್ಞ ಹಾಗೂ ಫೆಬ್ರವರಿ 3ರಂದು ಸಹಸ್ರ ಚಂಡಿಕಾಯಾಗ ನಡೆಯಲಿದೆ.