ಬೆಂಗಳೂರು: ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡಲ್ಲ ಅಂತ ಮತ್ತೊಮ್ಮೆ ಸರ್ಕಾರ ಸ್ಪಷ್ಟನೆ ನೀಡಿದೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ (Congress) ಸದಸ್ಯ ಐವಾನ್ ಡಿಸೋಜಾ (Ivan d’souza) ಪ್ರಶ್ನೆ ಕೇಳಿದರು. ಕಸ್ತೂರಿ ರಂಗನ್ ವರದಿ ರಾಜ್ಯದಲ್ಲಿ ಜಾರಿ ಮಾಡಬಾರದು. ಅವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಲಾಗಿದೆ. ಸ್ಯಾಟ್‌ಲೈಟ್ ಮೂಲಕ ಸರ್ವೆ ಮಾಡಲಾಗಿದೆ. ಸರಿಯಾಗಿ ಸರ್ವೆ ಆಗಿಲ್ಲ. ಈ ವರದಿ ಜಾರಿ ಮಾಡಿದರೆ ಕರಾವಳಿ ಭಾಗಕ್ಕೆ ಸಮಸ್ಯೆ ಆಗುತ್ತದೆ. ಈ ವರದಿ ರಾಜ್ಯದ ಜನರಿಗೆ ಮರಣ ಶಾಸನವಾಗಿದೆ. ಹೀಗಾಗಿ ಕಸ್ತೂರಿ ರಂಗನ್ ವರದಿ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.ಇದನ್ನೂ ಓದಿ: ಏರ್ಪೋರ್ಟ್ ವಿಚಾರಕ್ಕೆ 3 ಸಚಿವರ ನಡುವೆ ಸದನದಲ್ಲಿ ವಾಗ್ವಾದ
ಇದಕ್ಕೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಉತ್ತರ ನೀಡಿ, ಕಸ್ತೂರಿ ರಂಗನ್ ವರದಿ ಬಂದ ಮೇಲೆ ಕೇಂದ್ರ ಸರ್ಕಾರ 6 ಅಧಿಸೂಚನೆ ಹೊರಡಿಸಿದೆ. ಕೇಂದ್ರದ ಎಲ್ಲಾ ಅಧಿಸೂಚನೆಯನ್ನು ನಾವು ತಿರಸ್ಕಾರ ಮಾಡಿದ್ದೇವೆ. 6ನೇ ಬಾರಿ ಸೂಚನೆ ಹೊರಡಿಸಿದ ಮೇಲೆ ಜನಪ್ರತಿನಿಧಿಗಳ ಸಭೆ ಮಾಡಿದ್ದೇವೆ. ಕ್ಯಾಬಿನೆಟ್ ಮತ್ತು ಕ್ಯಾಬಿನೆಟ್ ಉಪಸಮಿತಿಯಲ್ಲಿ ಚರ್ಚೆ ಮಾಡಲಾಗಿದೆ. ಕೇಂದ್ರದ 6ನೇ ಅಧಿಸೂಚನೆ ರದ್ದು ಮಾಡಬೇಕು ಎಂದು 2024ರ ಸೆ.30ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕರಾವಳಿ ಭಾಗದಲ್ಲಿ ಇರುವವರಿಗೆ ಯಾವುದೇ ಸಮಸ್ಯೆ ಆಗಲ್ಲ. ಕೇಂದ್ರದ ವರದಿ ತಿರಸ್ಕಾರ ಮಾಡಲಾಗಿದೆ. ಸಂರಕ್ಷಿತ ಪ್ರದೇಶ ಬಿಟ್ಟು ಬೇರೆ ಕಡೆ ಯಾವುದೇ ಸಮಸ್ಯೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

