ಸಯ್ಯದ್ ಗಿಲಾನಿಗೆ ದೂರವಾಣಿ ಸಂಪರ್ಕ ಕಲ್ಪಿಸಿದ್ದ ಇಬ್ಬರು BSNL ಅಧಿಕಾರಿಗಳ ಅಮಾನತು

Public TV
1 Min Read
Syed Ali Shah Geelani

ಶ್ರೀನಗರ: ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಸಯ್ಯದ್ ಅಲಿ ಶಾ ಗಿಲಾನಿಗೆ ದೂರವಾಣಿ ಸಂಪರ್ಕ ಕಲ್ಪಿಸಿದ್ದ ಆರೋಪದ ಅಡಿ ಇಬ್ಬರು ಬಿಎಸ್‍ಎನ್‍ಎಲ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಆಗಸ್ಟ್ 5ರಂದು ಪ್ರಕಟಿಸಿತ್ತು. ಜೊತೆಗೆ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರ ಪ್ರಕಟಿಸುವ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ದೂರವಾಣಿ, ಅಂತರ್ಜಾಲ ಸಂಪರ್ಕಗಳನ್ನು ಆಗಸ್ಟ್ 4ರಿಂದ ಕಡಿತಗೊಳಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿಯೂ ಸಯ್ಯದ್ ಗಿಲಾನಿಗೆ ಅಂತರ್ಜಾಲ ಸೌಲಭ್ಯವನ್ನು ಒದಗಿಸಲಾಗಿತ್ತು ಎಂದು ಆರೋಪಿಸಲಾಗಿದೆ.

Syed Ali Shah Geelani A

ದೂರವಾಣಿ ಮತ್ತು ಅಂತರ್ಜಾಲ ಸೌಲಭ್ಯ ಕಡಿತಗೊಂಡಿದ್ದರಿಂದ ಜಮ್ಮು-ಕಾಶ್ಮೀರ ಒಂದು ವಾರ ಸ್ತಬ್ಧವಾಗಿತ್ತು. ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಹಾಗೂ ಫಾರೂಕ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಜೊತೆಗೆ ಇಡೀ ಕಣಿವೆಯಲ್ಲಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಒಂದು ವಾರದಿಂದ ರಾಜ್ಯದಾದ್ಯಂತ ಎಲ್ಲ ಸಂವಹನ ಮಾಧ್ಯಮಗಳನ್ನು ನಿರ್ಬಂಧಿಸಲಾಗಿತ್ತು.

ಇಂತಹ ಸನ್ನಿವೇಶದಲ್ಲಿಯೂ ಹುರಿಯತ್ ನಾಯಕ ಸಯ್ಯದ್ ಗಿಲಾನಿಗೆ ಅಂತರ್ಜಾಲ ಹಾಗೂ ದೂರವಾಣಿ ಸೌಲಭ್ಯ ಸಿಕ್ಕಿತ್ತು. ಇದು ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ. ಆದರೆ ಯಾವಾಗ ಸಯ್ಯದ್ ಗಿಲಾನಿ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಟ್ವೀಟ್ ಮಾಡಿದರೋ ಆಗ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರಿಂದಾಗಿ ಗಿಲಾನಿ ಸೇರಿದಂತೆ ಒಟ್ಟು 8 ಜನರ ಟ್ವಿಟ್ಟರ್ ಖಾತೆಯನ್ನು ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಸಯ್ಯದ್ ಗಿಲಾನಿಗೆ ಅಂತರ್ಜಾಲ ಹಾಗೂ ದೂರವಾಣಿ ಸೌಲಭ್ಯ ಕಲ್ಪಿಸಿದ್ದ ಇಬ್ಬರು ಬಿಎಸ್‍ಎನ್‍ಎಲ್ ಅಧಿಕಾರಿಗಳನ್ನು ಮಾನತು ಮಾಡಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *