– ಡಿ1 ಗೇಟ್ ಮೂಲಕ ಪ್ರವೇಶ ಪಡೆದಿದ್ದ ವ್ಯಕ್ತಿ
ಲಕ್ನೋ: ಅಯೋಧ್ಯೆಯ (Ayodhya) ರಾಮಮಂದಿರ (Ram Mandir) ಆವರಣದಲ್ಲಿ ನಮಾಜ್ ಮಾಡಲು ಯತ್ನಿಸಿದ ಕಾಶ್ಮೀರಿ ಮೂಲದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವ್ಯಕ್ತಿಯನ್ನು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಿವಾಸಿ ಅಹ್ಮದ್ ಶೇಖ್ (55) ಎಂದು ಗುರುತಿಸಲಾಗಿದೆ. ಶುಕ್ರವಾರ ಹೆಚ್ಚಿನ ಭದ್ರತೆಯ ದೇವಾಲಯದ ಆವರಣಕ್ಕೆ ಪ್ರವೇಶಿಸಿ, ಸೀತಾ ರಸೋಯಿ ಪ್ರದೇಶದ ಬಳಿ ಕುಳಿತು ನಮಾಜ್ ಮಾಡಲು ಯತ್ನಿಸಿದ್ದ. ಇದನ್ನೂ ಓದಿ: Ayodhya | ರಾಮ ಮಂದಿರದ 15 ಕಿಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ವಿತರಣೆ ನಿಷೇಧ!
ಆತನ ಕೃತ್ಯವನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ತಡೆದರು. ದೇವಾಲಯದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ನಂತರ ವಿಚಾರಣೆಗಾಗಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದರು. ನಮಾಜ್ ಮಾಡುವುದನ್ನು ತಡೆದಾಗ ವ್ಯಕ್ತಿ ಘೋಷಣೆಗಳನ್ನು ಕೂಗಿದ್ದ ಎನ್ನಲಾಗಿದೆ.

ತನಿಖೆ ಮತ್ತು ಗುಪ್ತಚರ ಸಂಸ್ಥೆಗಳು ಆ ವ್ಯಕ್ತಿಯ ಉದ್ದೇಶವನ್ನು ತಿಳಿಯಲು ವಿಚಾರಣೆ ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಅಯೋಧ್ಯೆಗೆ ಏಕೆ ಬಂದ? ಇಲ್ಲಿ ನಮಾಜ್ ಮಾಡುವ ಉದ್ದೇಶ ಏನು? ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ವ್ಯಕ್ತಿ ಬಳಿ ಗೋಡಂಬಿ ಮತ್ತು ಒಣದ್ರಾಕ್ಷಿ ಇತ್ತು. ತಾನು ಅಜ್ಮೀರ್‌ಗೆ ಪ್ರಯಾಣಿಸುತ್ತಿರುವುದಾಗಿ ಆತ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಘಟನೆಯ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಗುಪ್ತಚರ ಸಂಸ್ಥೆಗಳು ರಾಮಮಂದಿರ ಸಂಕೀರ್ಣದಲ್ಲಿನ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿವೆ. ಜಿಲ್ಲಾಡಳಿತ ಮತ್ತು ರಾಮಮಂದಿರ ಟ್ರಸ್ಟ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿವೆ. ಇದನ್ನೂ ಓದಿ: Delhi Cold Wave | ವರ್ಷದಲ್ಲೇ ಅತ್ಯಂತ ಕನಿಷ್ಠ; 4.2° ಸೆಲ್ಸಿಯಸ್‌ಗೆ ಕುಸಿದ ತಾಪಮಾನ
ಮುಂದಿನ ವಾರ ಅಯೋಧ್ಯೆಯಲ್ಲಿ ಮಕರ ಸಂಕ್ರಾಂತಿ ಆಚರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ. ದೇವಾಲಯ ಪಟ್ಟಣದಾದ್ಯಂತ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಜನವರಿ 22 ರಂದು ರಾಮಮಂದಿರದ ಎರಡನೇ ವಾರ್ಷಿಕೋತ್ಸವ ನಡೆಯಲಿದೆ.

