ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡ್ತಿದ್ದ ನವವಿವಾಹಿತ ದಂಪತಿಯನ್ನ ಮದುವೆಯ ದಿನವೇ ಕೆಲಸದಿಂದ ವಜಾ ಮಾಡಲಾಗಿದೆ. ಈ ಜೋಡಿಯ ರೊಮ್ಯಾನ್ಸ್ ನಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಶಾಲೆಯವರು ಹೇಳಿಕೆ ನೀಡಿದ್ದಾರೆ.
ಪುಲ್ವಾಮಾದ ಟ್ರಾಲ್ ಟೌನ್‍ನವರಾದ ರಾತಿಖ್ ಭಟ್ ಹಾಗೂ ಸುಮಾಯಾ ಬಶೀರ್ ಕೆಲಸದಿಂದ ವಜಾಗೊಂಡಿರೋ ದಂಪತಿ. ಈ ಇಬ್ಬರೂ ಕಳೆದ ಹಲವು ವರ್ಷಗಳಿಂದ ಪಾಂಫೋರ್ ಮುಸ್ಲಿಂ ಎಜಿಕೇಷನಲ್ ಇನ್ಸ್‍ಟಿಟ್ಯೂಟ್‍ನಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ಕೆಲಸ ಮಾಡುತ್ತಿದ್ದರು. ಆದ್ರೆ ಇದ್ದಕ್ಕಿದ್ದಂತೆ ನವೆಂಬರ್ 30 ರಂದು ನಮ್ಮ ಮದುವೆ ನಡೆದ ದಿನವೇ ಶಾಲೆಯವರು ನಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆಂದು ದಂಪತಿ ಹೇಳಿದ್ದಾರೆ.
ಈ ಬಗ್ಗೆ ಶಾಲೆಯ ಪ್ರಿನ್ಸಿಪಲ್ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಶಾಲೆಯ ಅಧ್ಯಕ್ಷರಾದ ಬಶೀರ್ ಮಸೂದಿ ಪ್ರತಿಕ್ರಿಯೆ ನೀಡಿದ್ದು, ಇವರಿಬ್ಬರೂ ಮದುವೆಗೆ ಮುಂಚೆ ರೊಮ್ಯಾಂಟಿಕ್ ರಿಲೇಷನ್‍ಶಿಪ್‍ನಲ್ಲಿ ಇದ್ದ ಕಾರಣ ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಿದ್ದಾರೆ. ಶಾಲೆಯಲ್ಲಿ 2 ಸಾವಿರ ಮಕ್ಕಳಿದ್ದು, 200 ಸಿಬ್ಬಂದಿ ಕೆಲಸ ಮಾಡುತ್ತಾರೆ. ಈ ಜೋಡಿಯ ರೊಮ್ಯಾನ್ಸ್‍ನಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮಸೂದಿ ಹೇಳಿದ್ದಾರೆ.
ಆದ್ರೆ ದಂಪತಿ ತಮ್ಮ ಮದುವೆ ಹಿರಿಯರು ನಿಶ್ಚಯಿಸಿದ್ದು ಎಂದು ಹೇಳಿದ್ದಾರೆ. ನಮ್ಮದು ಅರೇಂಜ್ಡ್ ಮ್ಯಾರೇಜ್. ಕೆಲವು ತಿಂಗಳ ಹಿಂದೆಯಷ್ಟೇ ನಮ್ಮ ನಿಶ್ಚಿತಾರ್ಥವಾಗಿತ್ತು. ನಂತರ ಸುಮಾಯಾ ಶಾಲಾ ಸಿಬ್ಬಂದಿಗೆ ಪಾರ್ಟಿ ಕೊಟ್ಟಿದ್ದರಿಂದ ಈ ವಿಷಯ ಶಾಲೆಯ ಎಲ್ಲಾ ಆಡಳಿತ ಮಂಡಳಿವರಿಗೆ ಗೊತ್ತಿತ್ತು ಎಂದು ರಾತಿಖ್ ಭಟ್ ಹೇಳಿದ್ದಾರೆ. ಒಂದು ವೇಳೆ ನಮ್ಮ ಸಂಬಂಧದಿಂದ ಈ ರೀತಿ ಆಗುತ್ತಿದೆ ಎಂದಾದರೆ ಆ ಬಗ್ಗೆ ವಿವರಣೆ ನೀಡಲು ಶಾಲೆಯವರು ಯಾಕೆ ಅವಕಾಶ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮದುವೆಗಾಗಿ ಒಂದು ತಿಂಗಳ ಹಿಂದೆಯೇ ರಜೆ ಕೋರಿದ್ದೆವು. ರಜೆಯನ್ನು ಮಂಜೂರು ಮಾಡಿದ್ದರು. ಒಂದು ವೇಳೆ ಅವರು ಹೇಳಿದಂತೆ ನಾವು ರೊಮ್ಯಾಂಟಿಕ್ ಸಂಬಂಧದಲ್ಲಿ ಇದ್ದಿದ್ದಾದ್ರೆ ಮದುವೆ ಬಗ್ಗೆ ಘೋಷಿಸಿದ ಮೇಲೆ ಅವರಿಗೆ ಇದು ಗೊತ್ತಾಯ್ತಾ? ಎಂದು ಹೇಳಿದ್ದಾರೆ. ಶಾಲೆಯವರು ನಮ್ಮ ಘನತೆಗೆ ಧಕ್ಕೆ ತಂದಿದ್ದಾರೆಂದು ದಂಪತಿ ಆರೋಪಿಸಿದ್ದಾರೆ. ನಾವು ಮದುವೆಯಾಗಿದ್ದೀವಿ. ಯಾವುದೇ ಪಾಪ ಅಥವಾ ಅಪರಾಧ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.