Connect with us

Latest

ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಯೇ ತೀರುತ್ತೇವೆ – ರಾಜನಾಥ್ ಸಿಂಗ್

Published

on

ನವದೆಹಲಿ: ಭಾರತ- ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಕಾರಣವಾಗಿರುವ ಕಾಶ್ಮೀರ ವಿವಾದ ಇತ್ಯರ್ಥ ಹಂತವನ್ನು ತಲುಪಿದ್ದು, ಜಗತ್ತಿನ ಯಾವ ಶಕ್ತಿಯಿಂದಲೂ ಈ ವಿಚಾರ ಇತ್ಯರ್ಥ ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಹೇಳಿದ್ದಾರೆ.

ಕಾರ್ಗಿಲ್ ವಿಜಯದ 20ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಶನಿವಾರ ಜಮ್ಮು-ಕಾಶ್ಮೀರದ ದ್ರಾಸ್ ವಲಯದಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತೆರಳಿ ರಾಜ್‍ನಾಥ್ ಸಿಂಗ್ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಬಳಿಕ ಕಠುವಾ ಜಿಲ್ಲೆಯ ಉಜ್ ಮತ್ತು ಸಾಂಬಾ ಜಿಲ್ಲೆಯ ಬಸಂತರ್‍ನಲ್ಲಿ 50 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಲಾಗಿರುವ ಎರಡು ಸೇತುವೆಗಳನ್ನು ಉದ್ಘಾಟನೆ ಮಾಡಿದರು.

ಈ ವೇಳೆ ಮಾತನಾಡುತ್ತ ಕಾಶ್ಮೀರದ ವಿವಾದದ ಬಗ್ಗೆ ಪ್ರಸ್ತಾಪಿಸಿ, ಕಾಶ್ಮೀರ ನನ್ನ ಹೃದಯದಲ್ಲಿದೆ. ಅಲ್ಲದೆ ಸರ್ಕಾರ ಕಾಶ್ಮೀರವನ್ನು ಕೇವಲ ಭಾರತದ ಸ್ವರ್ಗವನ್ನಾಗಿ ಅಷ್ಟೇ ಇರಿಸಿದೆ. ಜಾಗತಿಕ ಮಟ್ಟದಲ್ಲಿ ಕಾಶ್ಮೀರವನ್ನು ಪ್ರವಾಸಿಗರ ಸ್ವರ್ಗವನ್ನಾಗಿಸಲು ಪ್ರಯತ್ನಿಸುತ್ತಿದೆ. ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಸಾಗಲು ಸರ್ಕಾರ ಹೆಚ್ಚಿನ ಶ್ರಮವಹಿಸುತ್ತಿದೆ ಎಂದು ಸಚಿವರು ತಿಳಿಸಿದರು.

ನಮ್ಮ ಸರ್ಕಾರ ಕಾಶ್ಮೀರ ವಿವಾದವನ್ನು ಬಗೆಹರಿಸಲಿದೆ. ಮಾತುಕತೆಯ ಮೂಲಕ ಬಗೆಹರಿಯದಿದ್ದರೆ ಯಾವ ತಂತ್ರವನ್ನು ಬಳಸಬೇಕು ಎಂಬುದು ನಮಗೆ ಗೊತ್ತಿದೆ. ಈ ಭೂಮಿ ಮೇಲಿನ ಯಾವ ಶಕ್ತಿಯೂ ಕಾಶ್ಮೀರ ವಿವಾದ ಇತ್ಯರ್ಥವಾಗುವುದನ್ನು ತಡೆಯಲು ಸಾಧ್ಯವಿಲ್ಲ. ಇದನ್ನು ನಾವು ಬಗೆಹರಿಸಿಯೇ ತೀರುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

1999ರಲ್ಲಿ ಭಾರತೀಯ ಸೇನೆಯು ಅಕ್ರಮವಾಗಿ ಒಳ ನುಸುಳುತ್ತಿದ್ದ ಪಾಕಿಸ್ತಾನ ಸೈನಿಕರು ಹಾಗೂ ಉಗ್ರರ ವಿರುದ್ಧ ಹೋರಾಡಿ, ಶ್ರೀನಗರದ ಲೇಹ್ ಹೆದ್ದಾರಿಯನ್ನು ಗಮನದಲ್ಲಿರಿಸಿಕೊಂಡು ಪಾಕಿಸ್ತಾನ ಆಕ್ರಮಿಸಿದ್ದ ಹಲವು ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿತ್ತು.

ಜು.14ರ ಭಾರತದ ವಿಜಯ ದಿನದಂದು ರಾಜ್‍ನಾಥ್ ಸಿಂಗ್ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, `ವಿಜಯ ಜ್ವಾಲೆ’ಯನ್ನು ಹೊತ್ತಿಸಿದ್ದರು. ಜ್ವಾಲೆಯು ಜು.26 ರಂದು ದ್ರಾಸ್ ತಲುಪಲಿದ್ದು, ಸುಮಾರು 9 ಪಟ್ಟಣಗಳು ಹಾಗೂ ನಗರಗಳನ್ನು ಹಾದು ಹೋಗಲಿದೆ. ನಂತರ ಕಾರ್ಗಿಲ್‍ಗೆ ತಲುಪಿ ಶಾಶ್ವತ ವಿಜಯ ಜ್ವಾಲೆ ಬಳಿ ವಿಲೀನಗೊಳಿಸಲಾಗುತ್ತದೆ.

ವಿಜಯ ದಿನವನ್ನು ಭಾರತೀಯ ಸೇನೆ ವಿಜೃಂಭಣೆಯಿಂದ ಆಚರಿಸಿದೆ. ಈ ಮೂಲಕ ಆಪರೇಷನ್ ವಿಜಯ್‍ನಲ್ಲಿ ಭಾಗವಹಿಸಿದ ಯೋಧರಿಗೆ ನಮನ ಸಲ್ಲಿಸಲಾಯಿತು. ಆಪರೇಷನ್ ವಿಜಯ್‍ನ್ನು `ರಿಮೆಂಬರ್, ರೀಜಾಯ್ಸ್ ಆಂಡ್ ರಿನ್ಯೂ(ನೆನಪಿಡಿ, ಹೆಮ್ಮೆಪಡಿ ಮತ್ತು ನವೀಕರಿಸಿ)’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು. ಅಲ್ಲದೆ, ಸೈನ್ಯದ ಮೂರು ಬೆಟಾಲಿಯನ್‍ಗಳು ಅಸಾಧ್ಯವಾಗದ ಸ್ಥಿಯಲ್ಲಿ ಹೋರಾಡಿದ ಶಿಖರಗಳಿಗೆ ದಂಡಯಾತ್ರೆ ಕೈಗೊಳ್ಳಲಾಗಿದೆ.

ಕಾರ್ಗಿಲ್ ವಿಜಯ ದಿನದ ಅಂಗವಾಗಿ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಬಿಎಸ್‍ಎಫ್ ಯೋಧರ ತಂಡಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸೈನಿಕರು, ಪೊಲೀಸ್ ಹಾಗೂ ಅರೆಸೇನಾ ಪಡೆಗಳ ಧೈರ್ಯದ ಕಥೆಗಳನ್ನು ಪ್ರದರ್ಶಿಸಿತು. ಅಲ್ಲದೆ ವಿವಿಧ ಕಾರ್ಯಕ್ರಮಗಳನ್ನು ಸೇನೆ ಏರ್ಪಡಿಸಿದ್ದು, ಕಾರ್ಗಿಲ್ ವಿಜಯ ದಿನದ ಹಿನ್ನೆಲೆ ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರ ಕುಟುಂಬ ಸದಸ್ಯರನ್ನು ಗೌರವಿಸಲಾಯಿತು.

Click to comment

Leave a Reply

Your email address will not be published. Required fields are marked *