ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಆಗಿರುವ ಕಾಶಿ ವಿಶ್ವನಾಥ ಕಾರಿಡಾರ್‌ನನ್ನು ಇಂದು ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಿದ್ದಾರೆ. ಈ ಯೋಜನೆಯಿಂದಾಗಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ.
ಈಗಾಗಲೇ ಮೋದಿ ಅವರು ಕಾಲಭೈರವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಾರಾಣಿಸಿಯ ಜನರು ಹೂ ಮಳೆ ಸುರಿಸಿ, ಮೋದಿ, ಮೋದಿ, ಹರ್ ಹರ್ ಮಹಾದೇವ್ ಎಂದು ಘೋಷಣೆ ಕೂಗುತ್ತಾ ಅದ್ಧೂರಿಯಾಗಿ ಪ್ರಧಾನಿಯವರನ್ನು ಸ್ವಾಗತಿಸಿದ್ದಾರೆ. ಮೋದಿಯವರು ಕಾವಿ ವಸ್ತ್ರವನ್ನು ಧರಿಸಿ ಗಂಗಾ ನದಿಯಲ್ಲಿ ಮುಳುಗಿ ಪುಣ್ಯ ಸ್ನಾನ ಮಾಡಿ, ಜಪ ಮಾಲೆ ಹಿಡಿದು ಜಪ ಮಾಡಿದ್ದಾರೆ.
ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ:
ಕಾಶಿ ವಿಶ್ವನಾಥ ಕಾರಿಡಾರ್ ವಿಶ್ವನಾಥ ದೇಗುಲ ಮತ್ತು ಪವಿತ್ರ ಗಂಗಾ ನದಿಯನ್ನು ನೇರವಾಗಿ ಸಂಪರ್ಕಿಸುತ್ತದೆ. ಈ ಮೊದಲು ದೇಗುಲ ಮತ್ತು ಪವಿತ್ರ ಗಂಗಾ ನದಿಗೆ ನೇರವಾದ ಸಂಪರ್ಕವಿರಲಿಲ್ಲ. ದೇಗುಲದ ಮೂರು ದಿಕ್ಕುಗಳಲ್ಲಿ ಮನೆಗಳು, ಕಟ್ಟಡಗಳು, ಆವರಿಸಿದ್ದವು. ಇದೀಗ ಕಿಕ್ಕಿರಿದ ಪ್ರದೇಶ, ಜನಸಂದಣಿಯಿಂದ ಯಾವುದೇ ಅಡೆತಡೆಗಳಿಲ್ಲದೆ ಗಂಗೆಯ ಲಲಿತಾ ಘಾಟ್‍ಗೆ ಭಕ್ತರು ಮಂದಿರದಿಂದ ಭೇಟಿ ನೀಡಬಹುದು. ದೇಗುಲದಲ್ಲಿ ನಿಂತೇ ಪ್ರಸಿದ್ಧ ಗಂಗಾರತಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಕಾರಿಡಾರ್ ದೇಗುಲ ಮತ್ತು ಲಲಿತಾ ಘಾಟ್‍ಗೆ ಸಂಪರ್ಕ ಕಲ್ಪಿಸುವುದು ಮಾತ್ರವಲ್ಲದೇ ದೇಗುಲ ಚೌಕ, ವಾರಾಣಸಿ ನಗರ ಗ್ಯಾಲರಿ, ಮ್ಯೂಸಿಯಂ, ವಿವಿಧ ಉದ್ದೇಶಿತ ಸಭಾಂಗಣ, ಹಾಲ್, ಭಕ್ತರಿಗೆ ಸೌಲಭ್ಯ ಒದಗಿಸುವ ಕೇಂದ್ರವಾಗಿದೆ. ಸಾರ್ವಜನಿಕ ತಂಗುದಾಣ, ಅರ್ಚಕರಿಗೆ ವಸತಿ ಮತ್ತು ಆಧ್ಯಾತ್ಮ ಗ್ರಂಥಾಲಯ ಮುಂತಾದ ಸೌಕರ್ಯಗಳನ್ನು ಕಾರಿಡಾರ್ ಒಳಗೊಂಡಿದೆ.
ಕಾರಿಡಾರ್‌ನಲ್ಲಿ ಏನಿದೆ?:
* ಯೋಜನೆಯಡಿ 24 ಕಟ್ಟಡ ನಿರ್ಮಾಣ
* ಸುಮಾರು 50 ಅಡಿ ಉದ್ದ ಕಾರಿಡಾರ್ ಗಂಗಾ ಮಣಿಕರ್ಣಿಕಾ, ಲಲಿತಾ ಘಾಟ್ ಮತ್ತು ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ದೇಗುಲವನ್ನು ಸಂಪರ್ಕಿಸುತ್ತದೆ. ಯಾತ್ರಾರ್ಥಿಗಳಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ.
* ವಾರಾಣಸಿ ಸಂಸ್ಕ್ರತಿ ಪ್ರತಿಬಿಂಬಿಸುವ ಮ್ಯೂಸಿಯಂ ಮತ್ತು ಸಭಾಂಗಣ ಮತ್ತು ಹೋಮ ಹವನದಂತಹ ಧಾರ್ಮಿಕ ಕಾರ್ಯ ನಡೆಸಲು ಯೋಗಶಾಲೆಗಳು ಇವೆ.
* ಆರ್ಚಕರು, ಸ್ವಯಂ ಸೇವಕರು ಮತ್ತು ಯಾತ್ರಾರ್ಥಿಗಳಿಗೆ ವಿಶೇಷ ವಸತಿಯನ್ನು ಮಾಡಲಾಗಿದೆ.
* ಗಂಗಾ ನದಿ ಕಣ್ತುಂಬಿಕೊಳ್ಳುವ ಗ್ಯಾಲರಿ ಇದ್ದು, ದೇಗುಲದ 7000 ಚದರ ಮೀ. ಪ್ರದೇಸ 10,000 ಜನರಿಗೆ ಧ್ಯಾನಕ್ಕೆ ಮೀಸಲು ಇಡಲಾಗಿದೆ. 7 ದ್ವಾರ ಕೆಫೆಟೇರಿಯಾ, ಆಧ್ಯಾತ್ಮ ಗ್ರಂಥಾಲಯ, ಫುಡ್ ಸ್ಟ್ರೀಟ್ ವ್ಯವಸ್ಥೆ ಇದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ
ಕಾಶಿ ದೇಗುಲ 3000 ಚದರಡಿ ವ್ಯಾಪ್ತಿಯಲ್ಲಿತ್ತು. ಮಹತ್ವಾಕಾಂಕ್ಷಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯೇ ಮೊದಲ ಹಂತದ ವೆಚ್ಚ399 ಕೋಟಿ ಆಗಿದ್ದು, 5 ಲಕ್ಷ ಚದರ ಅಡಿ ಪ್ರದೇಶಕ್ಕೆ ದೇಗುಲದ ವ್ಯಾಪ್ತಿ ವಿಸ್ತರಿಸಿದೆ. ಕಾರಿಡಾರ್ 320 ಮೀಟರ್ ಉದ್ದ ಮತ್ತು 20 ಮೀಟರ್ ಅಗಲ ಇದೆ. ಮೊದಲಿನಂತೆ ಕಿಕ್ಕಿರಿದ ರಸ್ತೆಗಳ ಬದಲಾಗಿ ಇದೀಗ ಸರಾಗವಾಗಿ ಕೇವಲ ಒಂದು ನಿಮಿಷದಲ್ಲಿ ದೇಗುಲದಿಂದ ಲಲಿತಾ ಘಾಟ್ ತಲುಪಬಹುದಾಗಿದೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ
ಮೋದಿ ಕಾಶಿ ಪರಿವರ್ತನೆ ಮಾಡಿದ್ದು ಹೇಗೆ?:
ಮೋದಿ ವಾರಾಣಸಿಯಿಂದ ಲೋಕಸಭೆಗೆ ಆಯ್ಕೆಯಾದ ಬೆನ್ನಲ್ಲೇ ಕಾಶಿ ಸ್ವರೂಪವನ್ನೇ ಬದಲಿಸಿದರು. ಈ ಹಿಂದಿನ ಹಳೆಯ ಕಾಶಿಯಲ್ಲಿ ಕಿರಿದಾದ ರಸ್ತೆಗಳಿದ್ದವು. ಅಸ್ವಚ್ಛತೆ ಎಲ್ಲಾ ಕಡೆ ಎದ್ದು ಕಾಣುತ್ತಿತ್ತು. ಇದನ್ನು ಬದಲಿಸಿದ ಅವರು ರಸ್ತೆಗಳ ಅಗಲೀಕರಣ ಮಾಡಿಸಿದರು. ನೈರ್ಮಲೀಕರಣಕ್ಕೆ ಕ್ರಮ ಕೈಗೊಂಡರು. ಮಲಿನವಾಗಿದ್ದ ಗಂಗಾ ನದಿಯನ್ನು “ನಮಾಮಿ ಗಂಗೆ” ಯೋಜನೆ ಅಡಿ ಸ್ವಚ್ಛಗೊಳಿಸಿದಉ. ಈಗ ‘ವಿಶ್ವನಾಥ ಕಾರಿಡಾರ್’ ಯೋಜನೆ ಜಾರಿಗೊಳಿಸಿ ದೇಗುಲದ ಗತವೈಭವ ಮರುಕಳಿಸಿದ್ದಾರೆ.