Connect with us

`ಭಾರತ್ ಮಾತಾ ಕೀ ಜೈ’ ಅನ್ನೋದು ಅಪರಾಧವಾದ್ರೆ, ನನ್ನನ್ನೂ ಶೂಟ್ ಮಾಡಿ: ಮೃತನ ತಾಯಿ

`ಭಾರತ್ ಮಾತಾ ಕೀ ಜೈ’ ಅನ್ನೋದು ಅಪರಾಧವಾದ್ರೆ, ನನ್ನನ್ನೂ ಶೂಟ್ ಮಾಡಿ: ಮೃತನ ತಾಯಿ

ಲಕ್ನೋ: ಉತ್ತರಪ್ರದೇಶದ ಕಾಸ್ ಗಂಜ್ ನಲ್ಲಿ ಗಣರಾಜ್ಯೋತ್ಸವ ದಿನದಂದೇ ಭುಗಿಲೆದ್ದ ಹಿಂಸಾಚಾರದಲ್ಲಿ 23 ವರ್ಷದ ಯುವಕನೊಬ್ಬ ಮೃತಪಟ್ಟಿದ್ದು, ಈ ಕುರಿತು ಮೃತನ ತಾಯಿ ತನ್ನ ಆಕ್ರೋಶ ಹೊರ ಹಾಕಿದ್ದಾರೆ.

ಈ ನೆಲದಲ್ಲೇ ಬದುಕಿ, ಹಿಂದೂಸ್ತಾನ್ ಜಿಂದಾಬಾದ್… ಭಾರತ್ ಮಾತಾ ಕೀ ಜೈ ಅಂತ ಹೇಳೋದು ಅಪರಾಧವಾಗೋದಾದ್ರೆ ನನ್ನನ್ನೂ ಕೂಡ ಗುಂಡಿಕ್ಕಿ ಸಾಯಿಸಿ ಅಂತ ಚಂದನ್ ತಾಯಿ ಸಂಗೀತ ಗುಪ್ತಾ ಹೇಳಿದ್ದಾರೆ.

ಏನಿದು ಘಟನೆ?: ಉತ್ತರಪ್ರದೇಶದ ಕಾಸ್ ಗಂಜ್ ನಲ್ಲಿ 69 ಗಣರಾಜ್ಯೋತ್ಸವ ದಿನದ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಕಾರ್ಯಕರ್ತರು ನಗರದಲ್ಲಿ ಬೈಕ್ ಜಾಥಾ ನಡೆಸಿದ್ದರು. ಈ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಹಿಂಸಾಚಾರದಲ್ಲಿ 22 ವರ್ಷದ ಚಂದನ್ ಬಲಿಯಾಗಿದ್ದರು. ಪರಿಣಾಮ ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ನನ್ನ ಮಗ ಪಾಕಿಸ್ತಾನಕ್ಕೆ ಜಿಂದಾಬಾದ್ ಅಂತ ಹೇಳಿಲ್ಲವೆಂದು ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿದ್ದಾರೆ ಅಂತ ಚಂದನ್ ತಂದೆ ಸುಶೀಲ್ ಗುಪ್ತಾ ಆರೋಪಿಸಿದ್ದಾರೆ.

ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರೋ ಇವರು, ನನ್ನ ಮಗ ಪಾಕಿಸ್ತಾನಕ್ಕೆ ಜಿಂದಾಬಾದ್, ಹಿಂದೂಸ್ತಾನ್ ಮುರ್ದಾಬಾದ್ ಎಂದು ಹೇಳುವುದನ್ನು ನಿಲ್ಲಿಸಿ ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿದ್ದಾನೆ. ಇದರಿಂದ ಸಿಟ್ಟುಗೊಂಡ ದುಷ್ಕರ್ಮಿಗಳು ಆತನ ಮೇಲೆ ಕಲ್ಲು ತೂರಾಟ ನಡೆಸಿ ಹತ್ಯೆಗೈದಿದ್ದಾರೆ ಅಂತ ಅವರು ಅಳಲು ತೋಡಿಕೊಂಡಿದ್ದಾರೆ.

ನಗರದ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿರೋ ಚಂದನ್, ಸಂಕಲ್ಪ ಅನ್ನೋ ಖಾಸಗಿ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದನು ಎಂದು ಅವರು ತಿಳಿಸಿದ್ದಾರೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 53 ಮಂದಿಯನ್ನು ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ದುಷ್ಕರ್ಮಿಗಳು 3 ಅಂಗಡಿಗಳು ಹಾಗೂ ಕೆಲ ವಾಣಿಜ್ಯ ಸಂಸ್ಥೆಗಳಿಗೆ ತೊಂದರೆ ನೀಡಿದ್ದಾರೆ. ಅಲ್ಲದೇ ಬಸ್ ಗೂ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬಳಿಕ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಗರದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಹಿಂಸಾಚಾರದಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.

Advertisement
Advertisement