ಕಾಸರಗೋಡು: ಕೇರಳ ಸರ್ಕಾರದ ಮಲೆಯಾಳಂ ಭಾಷೆ ಕಡ್ಡಾಯ ಆದೇಶ ವಿರೋಧಿಸಿ ಮೇ 21ಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಸಲು ಕನ್ನಡಿಗರು ಮುಂದಾಗಿದ್ದಾರೆ.
ಗಡಿನಾಡಿನ ಕನ್ನಡಿಗರು ಸಂದಿಗ್ದ ಸ್ಥಿತಿಗೆ ತಲುಪಿದ್ದಾರೆ. ಕನ್ನಡಿಗರು ಮಲೆಯಾಳಂ ಕಡ್ಡಾಯವಾಗಿ ಕಲಿಯಲೇ ಬೇಕು ಎನ್ನುವ ಧೋರಣೆಯಿಂದಾಗಿ ಕನ್ನಡ ಕಲಿತವರು, ಕಲಿಸುವವರು,ಹಾಗೂ ಕನ್ನಡಿಗರ ಸ್ಥಿತಿ ಚಿಂತಾಜನಕದತ್ತ ತಲುಪುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಪ್ರತಿಭಟನೆಗೆ ಸಹಕಾರ ನೀಡಬೇಕೆಂದು ಗಡಿನಾಡ ಕನ್ನಡಿಗರು ಮನವಿ ಮಾಡಿದ್ದಾರೆ.
Advertisement
ಹಲವು ಪ್ರತಿಭಟನೆ, ಮನವಿ ಸಲ್ಲಿಕೆಯನ್ನು ಈ ಮೊದಲು ಹಲವು ಕನ್ನಡ ಸಂಘಟನೆಗಳು, ಕನ್ನಡಪ್ರೇಮಿಗಳು ಒಂದಾಗಿ ಮಾಡಿದ್ದರೂ ಜನ ಸಾಮಾನ್ಯರ ಕೂಗು ಸರಕಾರಕ್ಕೆ ತಲುಪಲಿಲ್ಲ. ತಲುಪಿದ್ದರೂ ದಬ್ಬಾಳಿಕೆಯ ರೂಪದಲ್ಲಿ, ಯಾವುದೋ ಸೇಡನ್ನು ಕಾಸರಗೋಡಿನ ಜನತೆಯ ಮೂಲಕ ತೀರಿಸುತ್ತಿರುವಂತೆ ಇನ್ನಷ್ಟು ಪರಿಸ್ಥಿತಿ, ಹಾಗೂ ಕಾನೂನನ್ನು ಜಟಿಲಗೊಳಿಸಿ ಕನ್ನಡಿಗರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
Advertisement
ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ಕೊಡಬೇಕೆಂಬ ಕಾನೂನಿದ್ದರೂ ಕನ್ನಡಿಗರ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಇದನ್ನು ಎಲ್ಲರ ಒಕ್ಕೊರಲಿನಿಂದ ಪ್ರತಿಭಟಿಸಲೇ ಬೇಕಿದೆ. ರಾಜಕೀಯ, ಹಾಗೂ ಇನ್ನಿತರ ಸಂಕೋಲೆಗಳಿಂದ ಹೊರಬಂದು ನಾವೆಲ್ಲ ಗಡಿನಾಡಿನ ಕನ್ನಡಿಗರೆಂಬ ಕನ್ನಾಡಾಭಿಮಾನದಿಂದ ಎಲ್ಲರೂ ಒಂದಾಗಿ ಪ್ರತಿಭಟಿಸಬೇಕೆಂದು ಗಡಿನಾಡಿನ ಕನ್ನಡಿಗರು ಕೇಳಿಕೊಂಡಿದ್ದಾರೆ.
Advertisement
ಪ್ರತಿಭಟನೆ ಹೇಗೆ? ಮೇ23ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಛೇರಿಗೆ ಸಮಸ್ತ ಕನ್ನಡಿಗರೂ ಸೇರಿ ದಿಗ್ಬಂಧನ ಹಾಗೂ ಮೇ 21ರಂದು ಕಾಸರಗೋಡಿನ ಸಮಸ್ಯೆಯನ್ನು ರಾಷ್ಟ್ರೀಯ ನಾಯಕರುಗಳ ಗಮನಕ್ಕೆ ತರಲು ಸಾಮಾಜಿಕ ತಾಣಗಳ ಮೂಲಕ #KasaragoduKannadaUlisi ಟ್ರೆಂಡ್ ಮಾಡಲು ಮಾಡಲು ತೀರ್ಮಾನಿಸಿದ್ದಾರೆ.
Advertisement
ಎಲ್ಲಾ ಕನ್ನಡಪರ ಹೋರಾಟಗಾರರೂ ನೇರವಾಗಿ ಪ್ರತಿಭಟನೆಯಲ್ಲಿ ಹಾಗೂ ಟ್ವೀಟರ್ ಟ್ರೆಂಡ್ ನಲ್ಲಿ ಭಾಗವಹಿಸಬೇಕು. ಕಾಸರಗೋಡಿನ ಕನ್ನಡಿಗರ ಹಕ್ಕಿಗಾಗಿ ಸಮಸ್ತ ಕನ್ನಡಿಗರೂ ಕರ್ನಾಟಕದ ಎಲ್ಲಾ ಸಂಘಟನೆಗಳೂ ಪ್ರೀತಿಯಿಂದ ಕನ್ನಡಾಭಿಮಾನದಿಂದ ಕೈಜೋಡಿಸುವಂತೆ ಗಡಿನಾಡ ಕನ್ನಡಿಗರು ಮನವಿ ಮಾಡಿದ್ದಾರೆ.
ಮಲೆಯಾಳಂ ಕಡ್ಡಾಯದಿಂದ ಏನೆಲ್ಲಾ ಸಂಭವಿಸಬಹುದು?
– ಶಾಲೆಗಳಲ್ಲಿ ಕನ್ನಡ ಮುಖ್ಯೋಪಾದ್ಯಾಯರ ಅಗತ್ಯವಿಲ್ಲ
– ಸರಕಾರೀ ಕಛೇರಿಗಳಲ್ಲಿ ಕಾಸರಗೋಡಿನ ಕನ್ನಡಿಗರೇ ಬೇಕಿಲ್ಲ
– ಸರಕಾರದ ಎಲ್ಲಾ ಸುತ್ತೋಲೆಗಳು ಮಲೆಯಾಳದಲ್ಲಿ
– ಪಿಎಸ್‍ಸಿ ಪರೀಕ್ಷೆ ಮಲಯಾಳದಲ್ಲಿ ನಡೆಯುತ್ತದೆ ಮತ್ತು ಗಡಿನಾಡು ಕನ್ನಡಿಗ ಸವಲತ್ತು ಇಲ್ಲ
– ನಮ್ಮ ಸಂಸ್ಕೃತಿ ನಾಶವಾಗಿ ಭಾಷಾ ಅಲ್ಪಸಂಖ್ಯಾತ ಸೌಲಭ್ಯ ಕಡಿತ
– ಕೊನೆಯದಾಗಿ ಕನ್ನಡ ಭಾಷೆಯ ನಿರ್ನಾಮ
ಗಡಿನಾಡ ಕನ್ನಡಿಗರ ಮನವಿ ಏನು?
ನಾವು ಕಾಸರಗೋಡಿಗೆ ಮೂಲತಃ ಕನ್ನಡಿಗರು. ನಮ್ಮ ಜಾತಿ ಬೇರೆ ಇರಬಹುದು, ಮತ ಬೇರೆ ಇರಬಹುದು, ಮನೆಯಲ್ಲಿ ಆಡುವ ಭಾಷೆ ಬೇರೆ ಇರಬಹುದು. ಆದರೆ ಔದ್ಯೋಗಿಕವಾಗಿ ನಮ್ಮ ಭಾಷೆ ಕನ್ನಡ ಎಂದು ಭಾಷಾವಾರು ಪ್ರಾಂತ್ಯ ರಚನೆಯಾದ ಕಾಲದಲ್ಲೇ ಎಲ್ಲರೂ ಒಪ್ಪಿಕೊಂಡಿದ್ದೇವೆ. ಆದ್ದರಿಂದಲ್ಲವೆ ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರಿಸಲ್ಪಟ್ಟಾಗ ಇಲ್ಲಿನ ಕನ್ನಡಿಗರಿಗೆ ಸಂಧಾನಾತ್ಮಕವಾಗಿ ಭಾಷಾ ಅಲ್ಪಸಂಖ್ಯಾತರು ಎಂಬ ವಿಶೇಷ ಸ್ಥಾನಮಾನ ಲಭಿಸಿದ್ದು. ಅದಕ್ಕಾಗಿ ದಿಟ್ಟತನದಿಂದ ಹೋರಾಡಿದ ಕಾಸರಗೋಡಿನ ಕನ್ನಡ ಹೋರಾಟಗಾರರ ಪ್ರಯತ್ನವನ್ನು ವ್ಯರ್ಥ ಮಾಡಿದ ಪಾಪ ನಮಗೆ ಬರಬಾರದಲ್ಲವೆ? ಅದಕ್ಕಾಗಿಯೇ ಮಲೆಯಾಳ ಭಾಷಾ ಮಸೂದೆಯಿಂದ ಕನ್ನಡದ ಅಳಿವು ನಿಶ್ಚಯ ಎಂಬ ದೂರಗಾಮಿ ಚಿಂತನೆಯಿರುವ ಕನ್ನಡಿಗರೆಲ್ಲರೂ ಎಚ್ಚೆತ್ತು ಮಸೂದೆಯಿಂದ ಕಾಸರಗೋಡನ್ನು ಹೊರತುಪಡಿಸಬೇಕೆಂಬ ಬೇಡಿಕೆಯೊಂದಿಗೆ ಹೋರಾಟ ಕಣಕ್ಕಿಳಿದಿದ್ದೇವೆ.
ಇದರಲ್ಲಿ ಮೂಲತಃ ಕನ್ನಡಿಗರಾಗಿರುವ ಎಲ್ಲರೂ ಕೈ ಜೋಡಿಸಬೇಕಾದುದು ಧರ್ಮ, ಕರ್ತವ್ಯ. ಬನ್ನಿ… ಕನ್ನಡ ಉಳಿಸುವಲ್ಲಿ ನಿಮ್ಮ ಅಳಿಲ ಸೇವೆಯೂ ಇರಲಿ. ಕನ್ನಡಿಗರ ಶಕ್ತಿ ಪ್ರದರ್ಶನಕ್ಕೆ ನಿಮ್ಮ ಪಾಲ್ಗೊಳ್ಳುವಿಕೆಯೂ ಇರಲಿ. ಮೇ 23 ಮಂಗಳವಾರ, ಬೆಳಗ್ಗೆ 7.30 ಕ್ಕೆ ವಿದ್ಯಾನಗರ ಕಲೆಕ್ಟರೇಟ್ ಬಳಿಯಲ್ಲಿ ಒಟ್ಟು ಸೇರೋಣ. ಆ ಒಂದು ದಿನವನ್ನು ಕಾಸರಗೋಡಿನಲ್ಲಿ ಕನ್ನಡದ ಉಳಿವಿಗಾಗಿ ನಡೆಸುವ ಐತಿಹಾಸಿಕ ಹೋರಾಟಕ್ಕೆ ಕಾಯ್ದಿರಿಸೋಣ.
ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕನ್ನಡಿಗರ ಒಕ್ಕೂಟದ ಸಮಾಲೋಚನ ಸಭೆ ಪೈವಳಿಕೆನಗರ ಶಾಲೆಯಲ್ಲಿ ನಡೆಯಿತು. ಕಯ್ಯಾರು ಧರ್ಮ ಪ್ರಾಂತದ ಧರ್ಮಗುರು ವಂದನೀಯ ಫಾ| ವಿಕ್ಟರ್ ಡಿಸೋಜಾ ಮಾತನಾಡಿದರು.