ಕಾರವಾರ: ಹಳ್ಳಿಗಳಲ್ಲಿ ಜನರ ಸಮಸ್ಯೆ ತಿಳಿದು ಸೂಕ್ತ ಪರಿಹಾರ ಕಲ್ಪಿಸುವ ಸಂಬಂಧ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ತಿಂಗಳಿಗೊಮ್ಮೆ ಹಳ್ಳಿಗಳಿಗೆ ತೆರಳುವ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ಕುಮಟಾದ ಡಯಟ್ ಮೈದಾನದಲ್ಲಿ ಆಯೋಜಿಸಿದ್ದ ಮಿನಿ ವಿಧಾನಸೌಧದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದೆಲ್ಲೆಡೆ ಜಿಲ್ಲಾಧಿಕಾರಿಯನ್ನು ಕಲೆಕ್ಟರ್ ಎಂದು ಕರೆಯುತ್ತಾರೆ. ಹೀಗಾಗಿ ಜಿಲ್ಲಾಧಿಕಾರಿ ಎಂಬ ಹೆಸರನ್ನು ಕಲೆಕ್ಟರ್ ಎಂದು ಬದಲಿಸುವ ಪ್ರಸ್ತಾವ ನಮ್ಮ ಮುಂದಿದೆ. ಇದರ ಜತೆಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ತಿಂಗಳಿಗೆ ಒಮ್ಮೆ ಹಳ್ಳಿಗಳಿಗೆ ತೆರಳಿ, ಅಲ್ಲಿನ ಸಮಸ್ಯೆಗಳನ್ನು ಅರಿತು ಪರಿಹರಿಸಬೇಕು. ಈ ನಿಟ್ಟಿನಲ್ಲಿ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಪ್ರತಿ ತಿಂಗಳಿಗೊಮ್ಮೆ ಡಿಸಿ, ಉಪವಿಭಾಗಧಿಕಾರಿ, ತಹಶೀಲ್ದಾರರು ಒಂದು ಗ್ರಾಮ ಪಂಚಾಯತಿಗೆ ಭೇಟಿ ನೀಡಬೇಕು. ಬೆಳಗ್ಗೆ 11 ಗಂಟೆಗೆ ಹಳ್ಳಿಯಲ್ಲಿದ್ದು, ಸಂಜೆ 5 ಗಂಟೆಯವರೆಗೆ ಅಲ್ಲಿನ ಸಮಸ್ಯೆ ಪರಿಶೀಲಿಸಬೇಕು. ದಲಿತರ, ರೈತರ ಮನೆಯಲ್ಲಿ ಊಟ ಮಾಡಬೇಕು. ಇದನ್ನು ಇಡೀ ರಾಜ್ಯದ ಜಿಲ್ಲಾಧಿಕಾರಿಗಳು ಅನುಸರಿಸಬೇಕು ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡಿದ್ದರೆ ಸಮಸ್ಯೆ ತಿಳಿಯುವುದಿಲ್ಲ. ಬದಲಿಗೆ ಭೇಟಿ ನೀಡಿದ ವೇಳೆ ಶಾಲಾ ಅಂಗನವಾಡಿಗಳು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕು. ಹಿರಿಯರ ಪಿಂಚಣಿ, ಖಾತಾ ಸಮಸ್ಯೆ, ರೈತರ ಸಮಸ್ಯೆಗಳ ಬಗ್ಗೆ ಪರಿಶೀಲಿಸಬೇಕು. ಪ್ರವಾಹ ಸಂತ್ರಸ್ತರಿಗೆ ಸರ್ಕಾರದಿಂದ ತೊಂದರೆಯಾಗಬಾರದು. ಕೂಡಲೇ ಅವರು ಮನೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿ ಡಿಸಿ ಖಾತೆಯಲ್ಲಿ ಕನಿಷ್ಠ 5 ಕೋಟಿ ಇರಬೇಕು. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಡಿಸಿ ಖಾತೆಯಲ್ಲಿ 50 ಕೋಟಿ ಇದೆ. ಪ್ರವಾಹ ಸಂತ್ರಸ್ತರಿಗೆ ಕೂಡಲೇ ಮನೆ ಕಟ್ಟಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಶೇ. 80ರಷ್ಟು ಅರಣ್ಯ, ಸಮುದ್ರ, ನದಿ, ಹಿನ್ನೀರಿನಿಂದ ಆವೃತವಾಗಿದೆ. ಸಿಆರ್ಝೆಡ್ ಸಮಸ್ಯೆಯಿಂದಾಗಿ ಜನರಿಗೆ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ಜನರು ಎರಡ್ಮೂರು ಗುಂಟೆ ಜಾಗದಲ್ಲಿ ಜನರು ವಾಸಿಸುತ್ತಿದ್ದಾರೆ. ಇ-ಸ್ವತ್ತು ಎಂಬ ಭೂತದಿಂದ ಎಲ್ಲವೂ ಹಾಳಾಗಿದೆ. ಇದು ಬಹುದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದ್ದು, ಇದನ್ನು ನಿವಾರಿಸಿಕೊಡಬೇಕು. ಈ ಹಿಂದಿನ ಕಾಂಗ್ರೆಸ್, ಸಮ್ಮಿಶ್ರ ಸರ್ಕಾರದಲ್ಲಿ ಈ ನಿಯಮ ಸರಳೀಕರಣಗೊಳಿಸುವುದಾಗಿ ಹೇಳಿದ್ದರು.
ಇದರಿಂದ ಪುರಸಭೆಗಾಗಲಿ, ಗ್ರಾಮ ಪಂಚಾಯತಿಗಾಗಲಿ ಆದಾಯವಿಲ್ಲ. ಮನೆ ಕಟ್ಟಿಕೊಳ್ಳಲು ಆಗದೇ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆಗಳು ಬರುತ್ತಿಲ್ಲ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಟ್ಕಳ ಶಾಸಕ ಸುನೀಲ ನಾಯ್ಕ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಸಿಇಒ ಮೊಹಮ್ಮದ್ ರೋಶನ್, ಜಿಲ್ಲಾ ಪಂಚಾಯತಿ ಸದಸ್ಯರಾದ ರತ್ನಾಕರ್ ನಾಯ್ಕ, ಶ್ರೀಕಲಾ ಶಾಸ್ತ್ರಿ, ತಾಲೂಕು ಪಂಚಾಯತಿ ಅಧ್ಯಕ್ಷೆ ವಿಜಯಾ ಪಟಗಾರ ಇದ್ದರು.