ಕಾರವಾರ: ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ಅವರು 80,440 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದರು. ಸಮೀಪದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಭೀಮಣ್ಣ ನಾಯ್ಕ ಅವರನ್ನು 31,406 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಕಾಂಗ್ರೆಸ್ ನಿಂದ ಗೆದ್ದು ಶಾಸಕರಾಗಿದ್ದ ಶಿವರಾಂ ಹೆಬ್ಬಾರ್ ಅವರ ರಾಜೀನಾಮೆ ಹಾಗೂ ಅನರ್ಹತೆಯಿಂದಾಗಿ ಕ್ಷೇತ್ರಕ್ಕೆ ಡಿ.5ರಂದು ಉಪಚುನಾವಣೆಯ ಮತದಾನ ನಡೆದಿತ್ತು. 1.72 ಲಕ್ಷ ಮತದಾರರಿದ್ದ ಕ್ಷೇತ್ರದಲ್ಲಿ ಶೇ.77.52 ಮತದಾನವಾಗಿತ್ತು. 65,381 ಪುರುಷ ಹಾಗೂ 68,182 ಮಹಿಳೆಯರು ಸೇರಿ ಒಟ್ಟು 1,33,564 ಮಂದಿಯಿಂದ ಮತದಾನವಾಗಿತ್ತು.
Advertisement
Advertisement
ಶಿರಸಿಯ ಎಂ.ಇ.ಎಸ್ ಕಾಮರ್ಸ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು. ಹೆಬ್ಬಾರ್ ಅವರು 80,440 ಮತಗಳನ್ನು ಪಡೆದರೆ, ಭೀಮಣ್ಣ ನಾಯ್ಕ 49,034 ಮತಗಳನ್ನು ಪಡೆದು ಸೋಲನನುಭವಿಸಿದರು. 1,444 ಮತಗಳು ನೋಟಾಕ್ಕೆ ಬಿದ್ದಿದೆ.
Advertisement
ಈ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಚೈತ್ರಾ ಗೌಡ 1,235 ಮತ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಜೈತುನಬಿ ಜಿಗಳೂರರಿಗೆ 443, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸುನೀಲ ಪವಾರ ಅವರಿಗೆ 281, ಪಕ್ಷೇತರ ಅಭ್ಯರ್ಥಿ ಮಹೇಶ್ ಹೆಗ್ಡೆ ಅವರಿಗೆ 301 ಚಿದಾನಂದ ಹರಿಜನ ಅವರಿಗೆ 413 ಮತಗಳು ಬಿದ್ದಿವೆ.
Advertisement
2018ರ ಚುನಾವಣೆಯಲ್ಲಿ ಶಿವರಾಂ ಹೆಬ್ಬಾರ್ 66,290 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿ.ಎಸ್.ಪಾಟೀಲ ಅವರನ್ನು ಕೇವಲ 1,904 ಮತಗಳಿಂದ ಸೋಲಿಸಿದ್ದರು. 2013ರ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ನಿಂದ ಸ್ಪರ್ಧಿಸಿ, ವಿ.ಎಸ್.ಪಾಟೀಲ ಅವರ ವಿರುದ್ಧ 24,489 ಮತಗಳ ಅಂತರದಿಂದ ಗೆದ್ದಿದ್ದರು. ಈ ವೇಳೆ 58,025 ಮತಗಳನ್ನು ಪಡೆದಿದ್ದರು. 2008ರಲ್ಲಿ 39,109 ಮತಗಳನ್ನು ಪಡೆದ ಹೆಬ್ಬಾರ್ ವಿ.ಎಸ್.ಪಾಟೀಲ ವಿರುದ್ಧ 2,485 ಮತಗಳ ಅಂತರದಿಂದ ಸೋಲು ಕಂಡಿದ್ದರು.