– ಕರ್ನಾಟಕ, ಉತ್ತರ ಪ್ರದೇಶದಲ್ಲಿ ಪೊಲೀಸರದ್ದು ಪೂರ್ವಯೋಜಿತ ಕೃತ್ಯ
ಕಾರವಾರ: ನಾವು ಯಾವುದೇ ಕಾರಣಕ್ಕೂ ಭಾರತ್ ಮಾತಾಕೀ ಜೈ ಎನ್ನುವುದಿಲ್ಲ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ ಹೇಳಿದ್ದಾರೆ.
ಸಿ.ಎ.ಎ ಮತ್ತು ಎನ್.ಆರ್.ಸಿ ವಿರುದ್ಧ ಪ್ರತಿಭಟಿಸುತಿದ್ದ ಜನರ ಮೇಲೆ ಮಂಗಳೂರಿನಲ್ಲಿ ಲಾಠಿ ಚಾರ್ಜ್ ಹಾಗೂ ಗೋಲಿಬಾರ್ ನಲ್ಲಿ ಇಬ್ಬರ ಜೀವ ಬಲಿಯಾಗಿದ್ದು ಹಲವಾರು ಜನರು ಗಾಯಗೊಂಡಿರುವ ಘಟನೆ ನಾಗರೀಕ ಸಮಾಜವನ್ನು ತೀವ್ರ ಘಾಸಿ ಗೊಳಿಸಿದೆ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ ಬೇಸರ ವ್ಯಕ್ತಪಡಿಸಿದರು.
Advertisement
Advertisement
ಇಂದು ಕಾರವಾರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹತ್ತು ದಿನಗಳಿಂದ ದೆಹಲಿಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ವಿಪರ್ಯಾಸ ಅಂದ್ರೆ ಕೇಂದ್ರ ಸರ್ಕಾರಕ್ಕೆ ಕಣ್ಣು ಕಿವಿ ಸರಿಯಾಗಿಲ್ಲ. ಕೇವಲ ಬಿಜೆಪಿ ಆಡಳಿತದಲ್ಲಿರುವ ರಾಜ್ಯದಲ್ಲಿ ಮಾತ್ರ ಹಿಂಸಾಚಾರಗಳು ನಡೆಯುತ್ತಿವೆ. ಸಾವಿರಾರು ಮಂದಿ ಆಸ್ಪತ್ರೆ ಸೇರುವಂತಾಗಿದೆ ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಪೊಲೀಸರು ಯಾವುದೇ ಹಿಂಸಾಚಾರವನ್ನೂ ನಡೆಸಿಲ್ಲ ಎಂದು ತಿಳಿಸಿದರು.
Advertisement
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾವು ಪ್ರತಿಕಾರ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಇದು ಏನನ್ನ ಸೂಚಿಸುತ್ತದೆ. ನಮ್ಮ ಪ್ರಜಾಪ್ರಭುತ್ವ ರಾಷ್ಟ್ರ, ಕಾನೂನಿನ ಪ್ರಕಾರ ದೇಶದ ಎಲ್ಲರೂ ಸಮಾನರು, ಸಂವಿಧಾನವನ್ನು ಕಾಲಡಿ ಹಾಕಿ ತುಳಿಯುವಂತೆ ನಿಯಮಗಳನ್ನು ರೂಪಿಸುವುದನ್ನು ವಿರೋಧಿಸುವವರನ್ನ ಹತ್ತಿಕ್ಕುವ ಕೆಲಸವನ್ನ ಸರ್ಕಾರವೇ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದರು.
Advertisement
ಸೆಕ್ಷನ್ 144ನ್ನ ತರಾತುರಿಯಲ್ಲಿ ರಾತ್ರಿ ವೇಳೆ ಜಾರಿ ಮಾಡಿದ್ದರು, ಮಂಗಳೂರಿನಲ್ಲಿ ಪ್ರತಿಭಟನೆಗೆ ಮೊದಲೇ ಅನುಮತಿ ಪಡೆದುಕೊಂಡಿದ್ದು ಹಿಂದಿನ ರಾತ್ರಿ ನಿಷೇಧಾಜ್ಞೆ ಜಾರಿ ಮಾಡಿದ್ದು ಸಾಕಷ್ಟು ಪ್ರತಿಭಟನಾಕಾರರಿಗೆ ಗೊತ್ತಿರಲಿಲ್ಲ. ಈ ವೇಳೆ ಸಿಂಡಿಕೇಟ್ ಬ್ಯಾಂಕ್ ವೃತ್ತದಲ್ಲಿ ಏನೂ ಅರಿಯದೇ ನಿಂತಿದ್ದವರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನೆಗೆ ಬಂದವರು ಕಲ್ಲು ತೂರಾಟ ಮಾಡದೇ ಬೇರೆ ದಾರಿ ಇರಲಿಲ್ಲ. ಈ ಹಿಂದೆ ನಿಷೇಧಾಜ್ಞೆ ಇದ್ದಾಗ ಸಾಕಷ್ಟು ಕಡೆ ಪ್ರತಿಭಟನೆಗಳಾಗಿವೆ, ಮೆರವಣಿಗೆಗಳು ನಡೆದಿವೆ. ಆದರೆ ಯಾವ ಕಡೆಗಳಲ್ಲೂ ಈ ರೀತಿ ಗುಂಡಿನ ದಾಳಿ ಲಾಠಿ ಚಾರ್ಜ್ ನಡೆದಿಲ್ಲ. ಮಂಗಳೂರಿನಲ್ಲಿ ಮಾತ್ರ ಯಾಕೆ? ಎಂದು ಪ್ರಶ್ನೆ ಮಾಡಿದರು.
ಪೊಲೀಸರು ಬಂದರು ರಸ್ತೆಯಲ್ಲಿ ನಿಂತಿದ್ದವರ ಮೇಲೆ ಎದೆಗೆ ಗುಂಡು ಹೊಡೆದು ಸಾಯಿಸುತ್ತೇನೆ ಎಂದು ಹೇಳಿಕೊಂಡು ಗುಂಡು ಹಾರಿಸಿದ್ದಾರೆ. ನಮ್ಮಲ್ಲಿ ಇಬ್ಬರು, ಉತ್ತರ ಪ್ರದೇಶದಲ್ಲಿ 23ಕ್ಕೂ ಅಧಿಕ ಮಂದಿಯ ಮೇಲೆ ಗುಂಡು ಹಾರಿಸಿದ್ದಾರೆ. ಹೈಲ್ಯಾಂಡ್ ಆಸ್ಪತ್ರೆ ಒಳಹೊಕ್ಕು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಈ ರೀತಿ ಹಿಂಸಾಚಾರ ನೋಡಿದ್ದೆವು, ಮಂಗಳೂರನಲ್ಲಿ ಇಂತಹ ಘಟನೆ ನೋಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೃತರ ಮನೆಗೆ ಭೇಟಿ ನೀಡಿದ ಸಿಎಂ ಸಾಂತ್ವನ ಹೇಳಿ 5 ಲಕ್ಷ ಪರಿಹಾರ ಘೋಷಣೆ ಮಾಡಿದರು. ಆದರೆ ಬೆಂಗಳೂರಿಗೆ ಹೋದ ಬಳಿಕ ಪರಿಹಾರ ಕೊಡಲ್ಲ ಎಂದು ಮಾತು ಬದಲಿಸಿದ್ದಾರೆ. ಯಾರಾದರೂ ಕಕ್ಕಿದ್ದನ್ನ ವಾಪಸ್ ತಿಂತಾರಾ? ಎಂದು ಮುಖ್ಯಮಂತ್ರಿಗಳ ನಡೆಗೆ ಅಕ್ರೋಶ ವ್ಯಕ್ತಪಡಿಸಿದರು. ಮೂರು ಪೊಲೀಸ್ ಅಧಿಕಾರಿಗಳ ದಡ್ಡತನ, ದರ್ಪದಿಂದ ಈ ರೀತಿ ಹಿಂಸಾಚಾರ ನಡೆಯುವಂತಾಗಿದೆ. ಆದರೆ ಯಾವುದೇ ಗುಂಡುಗಳಿಂದ ಲಾಠಿ ಚಾರ್ಜ್ ನಿಂದ ಜನರ ಪ್ರತಿಭಟನೆಗಳನ್ನ ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಆಸ್ತಿತ್ವದ ಪ್ರಶ್ನೆ ಬಂದಾಗ ಸುಮ್ಮನೆ ಕೂರುವುದು ಸಾಧ್ಯವಿಲ್ಲ ಇಂತಹ ಸರ್ಕಾರವನ್ನು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಎನ್.ಆರ್.ಸಿ ಯನ್ನು ದೇಶದಾದ್ಯಂತ ಜಾರಿ ಮಾಡ್ತೀವಿ ಎಂದು ಅಮಿತ್ ಶಾ ಹೇಳ್ತಾರೆ. ಆದರೆ ಪ್ರಧಾನಿ 2014-19 ರ ಅವಧಿಯಲ್ಲಿ ನಾವು ಎನ್.ಆರ್.ಸಿ ಬಗ್ಗೆ ಮಾತನಾಡಿಲ್ಲ ಅಂತಾರೆ. ಗೃಹಮಂತ್ರಿಗಳು ನಾವು ಕರ್ನಾಟಕದಲ್ಲಿ ಮೊದಲು ಎನ್.ಆರ್.ಸಿ ಜಾರಿ ಮಾಡ್ತೀವಿ ಅಂತಾರೆ. ಒಬ್ಬ ವ್ಯಕ್ತಿ ಎಷ್ಟು ಬಾರಿ ಸುಳ್ಳು ಹೇಳಿ ನಂಬಿಸಲು ಸಾಧ್ಯವಿದೆ. ಇದು ಕೇವಲ ಮುಸ್ಲಿಮರ ಪ್ರಶ್ನೆಯಲ್ಲ, ಬುಡಕಟ್ಟು, ದಲಿತರು, ಬಡವರಿಗೂ ತೊಂದರೆಯಾಗುತ್ತದೆ. ಇದು ದೇಶದ ಮತ್ತೊಂದು ಸ್ವಾತಂತ್ರ್ಯ ಸಮರ ಪ್ರಾರಂಭವಾಗಿದೆ. ನಾವು ಈ ನಿಟ್ಟಿನಲ್ಲೇ ಹೋರಾಟ ಮುಂದುವರೆಸುತ್ತೇವೆ ಎಂದರು.
ಭಾರತ ಮಾತಕೀ ಜೈ ಎನ್ನುವುದಿಲ್ಲ
ಅಲ್ಲಾಹು ಅಕ್ಬರ್ ಎನ್ನುವ ಜೊತೆ ಭಾರತ್ ಮಾತಾಕೀ ಜೈ ಎನ್ನಬಹುದಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬಿ ನಾವು ಯಾವುದೇ ಕಾರಣಕ್ಕೂ ಭಾರತ್ ಮಾತಾಕೀ ಜೈ ಎನ್ನುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಗಾಗಿ ತಂದಿದ್ದ ಪತಂಜಲಿ ನೀರಿನ ಬಾಟಲ್ ನಲ್ಲಿ ಇದ್ದ ಪತಾಂಜಲಿ ದಿವ್ಯ ಜಲ್ ಎಂಬ ಲೇಬಲ್ ಅನ್ನು ಹರಿದುಹಾಕಿ ನಂತರ ನೀರನ್ನು ಕುಡಿಯುವ ಮೂಲಕ ಪರೋಕ್ಷವಾಗಿ ಧಾರ್ಮಿಕ ಮುಖಂಡರ ವಿರುದ್ಧ ಕಿಡಿ ಕಾರಿದರು.