ಕಾರವಾರ: ಕುಮಾರಸ್ವಾಮಿ ಹೇಳಿಕೆಯಿಂದ ಮುಂದೊಂದು ದಿನ ಜೆಡಿಎಸ್ ಪಕ್ಷವನ್ನ ಜನ ಅಣಕು ಪಕ್ಷ ಎಂದು ತೀರ್ಮಾನ ಮಾಡುತ್ತಾರೆ. ಭಾರತ ಧರ್ಮ ಛತ್ರವಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರ ಮಾತಿನ ಅಣಕಕ್ಕೆ ಕಂದಾಯ ಸಚಿವ ಆರ್.ಅಶೋಕ್ ಚಾಟಿ ಬೀಸಿದ್ದಾರೆ.
ಇಂದು ಕುಮಟಾದಲ್ಲಿ ಮಿನಿ ವಿಧಾನಸೌದದ ಸ್ಥಳಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಬಾಂಬ್ ಇಡುವಂತಹ ಕೃತ್ಯ ಯಾರೇ ಮಾಡಿರಲಿ ಭಯೋತ್ಪಾದಕರು ಭಯೋತ್ಪಾದಕರೇ. ಪೊಲೀಸರ ಮೇಲೆ ಗೂಬೆ ಕೂರಿಸುವಂತದ್ದು ಅಕ್ಷಮ್ಯ ಅಪರಾಧ. ಅಲ್ಪಸಂಖ್ಯಾತರ ಓಲೈಕೆಗಾಗಿ ಇಂತಹ ಹೇಳಿಕೆಗಳನ್ನ ನೀಡುವುದು ಸಮಾಜಕ್ಕೆ ಒಳ್ಳೆಯದಲ್ಲ ಎಂದರು.
Advertisement
Advertisement
ಬಾಂಗ್ಲಾ ವಲಸಿಗರ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಾಂಗ್ಲಾ ವಲಸಿಗರು ಕಳೆದ 30 ವರ್ಷಗಳಿಂದ ವಲಸೆ ಬಂದಿರುವ ವಿಚಾರ ಇಡೀ ಜಗತ್ತಿಗೆ ಗೊತ್ತಿದೆ. ಅಂತಹವರಿಗೆ ಶೆಡ್ ಹಾಕಿಕೊಟ್ಟು, ರೇಷನ್ ಕಾರ್ಡ್ ನೀಡಿ ವೋಟ್ ಹಾಕಿಸಿಕೊಳ್ಳುವುದು ಕಾಂಗ್ರೆಸ್ ಚಾಳಿ. ಸಿದ್ದರಾಮಯ್ಯ ಹೇಳಿಕೆ ಅವರ ಅಭ್ಯಾಸ ಬಲವನ್ನ ತೋರಿಸುತ್ತಿದೆ. ಯಾರು ಬೇರೆ ದೇಶಗಳಿಂದ ಬಂದಿದ್ದಾರೆ ಪೌರತ್ವ ಇಲ್ಲದವರು ವಾಪಸ್ ಹೋಗಬೇಕು. ಭಾರತ ಧರ್ಮಛತ್ರ ಅಲ್ಲ. ಸಿದ್ದರಾಮಯ್ಯ ಭಾರತವನ್ನ ಬಾಂಗ್ಲಾ, ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಭಾರತ ಭಾರತವಾಗಿಯೇ ಉಳಿಯಬೇಕು. ಇದಕ್ಕೆ ಯಾವುದೇ ಅವಕಾಶ ನೀಡಲ್ಲ ಎಂದು ಗುಡುಗಿದರು.