ಕಾರವಾರ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಪ್ರಾಂಶುಪಾಲನೋರ್ವ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಪರಾರಿಯಾದ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.
ಹೊನ್ನಾವರದಲ್ಲಿ ಕಳೆದ 2016ರಿಂದ ‘ಕಲ್ಪತರು’ ಹೆಸರಿನಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜು ಪ್ರಾರಂಭವಾಗಿತ್ತು. ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮುಗಿಸಿದರೆ ವಿದೇಶದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಕಾಲೇಜಿನ ಪ್ರಾಂಶುಪಾಲ ಚೆನ್ನೈ ಮೂಲದ ಗಂಗಾಧರ ವಿದ್ಯಾರ್ಥಿಗಳನ್ನು ಕೋರ್ಸ್‍ಗೆ ದಾಖಲು ಮಾಡಿಕೊಂಡಿದ್ದ.
Advertisement
ಕಾಲೇಜು ಶುಲ್ಕ ಎಂದು ಪ್ರತಿಯೊಬ್ಬರಿಂದ 60 ಸಾವಿರ ಹಣವನ್ನು ಸಹ ಪಡೆದಿದ್ದ. ಇನ್ನು ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಹಾಂಕಾಂಗ್‍ನಲ್ಲಿರುವ ‘ಶಾಂಗ್ರಿಲಾ’ ಹೋಟೆಲ್ ನಲ್ಲಿ ಕೆಲಸ ಕೊಡಿಸುವುದಾಗಿ ಪ್ರಾಂಶುಪಾಲ ಗಂಗಾಧರ ಸುಮಾರು 76 ವಿದ್ಯಾರ್ಥಿಗಳಿಂದ 1.10 ಲಕ್ಷ ಹಣವನ್ನ ಪಡೆದಿದ್ದ. ವಿದ್ಯಾರ್ಥಿಗಳಿಗೆ ಪಾಸ್ ಪೋರ್ಟ್ ವೀಸಾ ಮಾಡಿಸಿ ಕೆಲಸಕ್ಕೆ ಕಳುಹಿಸುವುದಾಗಿ ಹೇಳಿ ಮೇ 6ರಂದು ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ. ಅಲ್ಲಿಂದ ಮೇ 10 ರಂದು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ ಹೋಟೆಲ್ ಒಂದರಲ್ಲಿ ತಂಗುವಂತೆ ಹೇಳಿ ಶಾಂಗ್ರಿಲಾ ಹೋಟೆಲ್ ನವರು ಇಲ್ಲಿ ಸಂದರ್ಶನ ತೆಗೆದುಕೊಳ್ಳುತ್ತಾರೆ ಎಂದು ಪ್ರಾಂಶುಪಾಲ ಹೇಳಿದ್ದ.
Advertisement
Advertisement
ಮೇ 12 ರಂದು ಗಂಗಾಧರ, ನಾನು ಕೆಲಸ ಇರುವ ಕಾರಣ ಮುಂಬೈಗೆ ಹೋಗುತ್ತಿದ್ದೇನೆ. ಒಂದು ವಾರದ ಒಳಗೆ ಬಂದು ನಿಮ್ಮ ಹಣ ವಾಪಸ್ ಕೊಡುತ್ತೇನೆ ಎಂದು ವಾಟ್ಸಪ್ ಮೆಸೇಜ್ ಮಾಡಿದ್ದಾನೆ. ಇದಾದ ನಂತರ ಕಷ್ಟಪಟ್ಟು ಹೋಟೆಲ್ ಬಿಲ್ ಕಟ್ಟಿ ವಾಪಸ್ ಊರಿಗೆ ಬಂದ ವಿದ್ಯಾರ್ಥಿಗಳು ಒಂದು ವಾರ ಪ್ರಾಂಶುಪಾಲನಿಗಾಗಿ ಕಾದರೂ ಪ್ರಾಂಶುಪಾಲ ಮಾತ್ರ ವಾಪಸ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವಂಚನೆಗೊಳಗಾದ ವಿದ್ಯಾರ್ಥಿಗಳು ನ್ಯಾಯ ಕೊಡಿಸುವಂತೆ ಅಪರ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
Advertisement
ಕೆಲಸ ಸಿಕ್ಕಿದ ಮೇಲೆ ಕಷ್ಟ ನಿವಾರಣೆ ಆಗುತ್ತದೆ ಎಂದು ಸಾಲ ಮಾಡಿ ಹಣ ಖರ್ಚು ಮಾಡಿದ್ದ ವಿದ್ಯಾರ್ಥಿಗಳು ಇದೀಗ ಕೆಲಸವೂ ಇಲ್ಲದೇ ಕೊಟ್ಟ ಹಣವೂ ವಾಪಸ್ ಸಿಗದೇ ಬೀದಿಗೆ ಬಿದ್ದು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಹಣವನ್ನು ಹೇಗಾದರೂ ಮಾಡಿ ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.