ಕಾರವಾರ: ಪ್ರತಿಯೊಬ್ಬರಿಗೂ ಮದುವೆ ಎನ್ನುವುದು ಜೀವನದ ಪ್ರಮುಖ ಕ್ಷಣ. ಈ ಸಂದರ್ಭವನ್ನು ಸದಾ ನೆನಪಿಟ್ಟುಕೊಳ್ಳಲು ಬಹಳಷ್ಟು ಮಂದಿ ಏನೇನೋ ಮಾಡುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮದುವೆಯ ಪತ್ರಿಕೆಯನ್ನು ಅಂದ ಚಂದದಿಂದ ಮುದ್ರಿಸಿ ತಮ್ಮ ಪ್ರತಿಷ್ಠೆ ಮೆರೆಯುತ್ತಾರೆ. ಆದರೇ ಇಲ್ಲೊಬ್ಬ ಪೊಲೀಸ್ ಸಿಬ್ಬಂದಿ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಮದುವೆಯ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಮದುವೆ, ವಧು-ವರರ ಹೆಸರು ಸೇರಿದಂತೆ ವಿವಾಹ ನಡೆಯುವ ಸ್ಥಳದ ಬಗ್ಗೆ ಮಾಹಿತಿ ನೀಡುವುದು ಸಾಮಾನ್ಯ. ಆದರೆ ಪೊಲೀಸ್ ಕಾನ್ಸ್ಟೇಬಲ್ ನಾರಾಯಣ ಎಂ.ಎಸ್ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮೂಲತಃ ಹಾವೇರಿ ಜಿಲ್ಲೆಯ ತಿಳುವಳ್ಳಿಯವರಾದ ಇವರು ಕಾರವಾರದ ಜಿಲ್ಲಾ ಸೈಬರ್ ಅಪರಾಧ ಠಾಣೆಯ ಪೊಲೀಸ್ ಅಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Advertisement
Advertisement
ಡಿ. 12ರಂದು ತಿಳುವಳ್ಳಿಯಲ್ಲಿ ಪ್ರತಿಭಾ ಅವರ ಜೊತೆ ನಾರಾಯಣ ಅವರ ವಿವಾಹ ನಡೆಯಲಿದ್ದು ವಿವಾಹ ಆಮಂತ್ರಣ ಪತ್ರಿಕೆ ಮಾತ್ರ ಬಹು ವಿಶಿಷ್ಠವಾಗಿದೆ. ಮದುವೆಯ ಮಾಹಿತಿಯ ಜೊತೆಗೆ ಸೈಬರ್ ಕ್ರೈಂ ವಿವರಗಳನ್ನು ಒಳಗೊಂಡಿರುವ ಆಮಂತ್ರಣ ಪತ್ರಿಕೆ ಸೈಬರ್ ವಂಚನೆಗಳು ಯಾವ ರೀತಿ ಆಗುತ್ತವೆ ಮತ್ತು ಅವುಗಳಿಂದ ಹೇಗೆ ರಕ್ಷಣೆ ಪಡೆಯಬೇಕು ಎಂಬುದನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.
Advertisement
ಮೊದಲು ಸೈಬರ್ ವಂಚನೆಯ ವಿಧಾನಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಮೊಬೈಲ್ ಗೆ ಬ್ಯಾಂಕಿನ ಹೆಸರಿನಲ್ಲಿ ಅಪರಿಚಿತ ಕರೆಗಳು ಬಂದಾಗ ಪಿನ್ ನಂಬರ್ ಇತ್ಯಾದಿ ನೀಡಿದರೆ ಹೇಗೆ ಹಣ ದೋಚುತ್ತಾರೆ. ವೈವಾಹಿಕ ಜಾಲತಾಣದಲ್ಲಿ ಮದುವೆ ಆಗುವುದಾಗಿ ನಂಬಿಸಿ ವಂಚಿಸುವ ಅಪರಾಧ, ಉದ್ಯೋಗ ಕೊಡಿಸುವುದಾಗಿ ಸುಳ್ಳು ಭರವಸೆ, ಆನ್ಲೈನ್ ಖರೀದಿಯಲ್ಲಿ ವಂಚನೆ ಇತ್ಯಾದಿ ವಿವರಗಳನ್ನು ನೀಡಲಾಗಿದೆ. ಅಲ್ಲದೆ ಈ ವಂಚನೆಗಳಿಂದ ಹೇಗೆ ಎಚ್ಚೆತ್ತುಕೊಳ್ಳಬೇಕು ಎನ್ನುವ ಬಗ್ಗೆಯೂ ವಿವರಿಸಲಾಗಿದೆ.
Advertisement
ಸಾಮಾನ್ಯ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸಿದಷ್ಟು ಸುಲಭವಾಗಿ ಸೈಬರ್ ಕ್ರೈಂ ವಿಭಾಗದಲ್ಲಿ ಆಗುವುದಿಲ್ಲ. ಮೋಸ ಮಾಡುವ ವ್ಯಕ್ತಿ ಪ್ರಪಂಚದ ಯಾವುದೇ ಮೂಲೆಯಲ್ಲಿಯಾದರೂ ಕುಳಿತು ಕೇವಲ ಒಂದು ಆಂಡ್ರಾಯ್ಡ್ ಫೋನ್ ಮೂಲಕ ಎಲ್ಲಿಯೋ ಇರುವ ಮುಗ್ಧನನ್ನು ಸುಲಭವಾಗಿ ವಂಚಿಸುತ್ತಾರೆ. ಅಲ್ಲದೇ ಆರೋಪಿಯ ನಿಖರವಾದ ಹೆಸರು, ವಿಳಾಸ ವಂಚನೆಗೊಳಗಾದವನಿಗೂ ಗೊತ್ತಿರುವುದಿಲ್ಲ. ಇಷ್ಟೊಂದು ಸಂಕೀರ್ಣವಾದ ಪ್ರಕರಣದಲ್ಲಿ ಅಂತಿಮವಾಗಿ ಆರೋಪಿಯನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯ. ಹಿಡಿದರೂ ತಪ್ಪಿಸಿಕೊಳ್ಳುವ ಸಾಕಷ್ಟು ದಾರಿಗಳಿವೆ.
ಜನರು ಈ ಬಗ್ಗೆ ಜಾಗೃತವಾಗಬೇಕಾಗಿದ್ದು ಸರಿಯಾದ ದಾರಿ ಎನ್ನುವುದು ನನಗೆ ಮನವರಿಕೆಯಾಗಿದೆ. ಈ ಮೊದಲು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ಜಾಗೃತಿ ಕುರಿತು ಉಪನ್ಯಾಸ ನೀಡುತ್ತಾ ಬಂದಿದ್ದೇನೆ. ವಿವಾಹ ಆಮಂತ್ರಣ ಪತ್ರಿಕೆಯು ಸಾವಿರಾರು ಜನರನ್ನು ತಲುಪಲು ಸಾಧ್ಯವಾಗದಿದ್ದರಿಂದ ಈ ವೇದಿಕೆಯನ್ನು ಬಳಸಿಕೊಂಡಿದ್ದೇನೆ ಎಂದು ನಾರಾಯಣ್ ಹೇಳುತ್ತಾರೆ.
ನಾರಾಯಣ್ ಅವರ ಈ ವಿಶಿಷ್ಠವಾದ ಮದುವೆ ಪತ್ರಿಕೆ ನೆಂಟರಿಷ್ಟರಲ್ಲದೆ ಸಾರ್ವಜನಿಕರಲ್ಲೂ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಮದುವೆ ಪತ್ರಿಕೆ ಕೇವಲ ಆಮಂತ್ರಣ ಪತ್ರಿಕೆಯಾಗದೇ ಜನರಿಗೆ ಕ್ರೈಂ ಬಗ್ಗೆ ಮಾಹಿತಿ ನೀಡುವ ಜಾಗೃತಿಗೊಳಿಸುವ ವೇದಿಕೆಯಾಗಿದ್ದು ನಿಜವಾಗಿಯೂ ಶ್ಲಾಘನೀಯವಾಗಿದೆ.