– ರಾಜ್ಯದ ಹಲವು ಜಿಲ್ಲೆಗಳಲ್ಲಿ ವಂಚನೆ
ಕಾರವಾರ: ತಾನೊಬ್ಬ ಐಟಿ ಅಧಿಕಾರಿ ಎಂದು ಹೇಳಿಕೊಂಡು ರಾಜ್ಯದ ನಾನಾ ಪ್ರದೇಶದ ಜನರಿಗೆ ಲಕ್ಷಾಂತರ ರುಪಾಯಿ ಪಂಗನಾಮ ಹಾಕಿದ ವ್ಯಕ್ತಿಯನ್ನು ಕಾರವಾರ ನಗರ ಪೊಲೀಸರು ಹಣದ ಸಮೇತ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವೇರಿ ಮೂಲದ ಪ್ರಶಾಂತ್ ಎಂದು ಹೇಳಿಕೊಂಡಿರುವ ವ್ಯಕ್ತಿಯೇ ಪೊಲೀಸರಿಂದ ಬಂಧನಕ್ಕೊಳಗಾದವನು. ಈತ ಕಾರವಾರದ ವಿನೋದ್ ನಾಯ್ಕ ಎಂಬವರಿಗೆ ತಾನೊಬ್ಬ ಐಟಿ ಅಧಿಕಾರಿ ಪೆಪ್ಸಿ ಕಂಪನಿಯಲ್ಲಿ ಡಿಸ್ಟ್ರಿಬೂಶನ್ ಕೆಲಸ ಕೊಡಿಸುತ್ತೇನೆ. 15 ಲಕ್ಷ ಕಂಪನಿಗೆ ಕಟ್ಟಬೇಕಾಗುತ್ತದೆ ಎಂದು ಹೇಳಿ ಒಂದು ಲಕ್ಷ ಹಣ ಮುಂಗಡ ಪಡೆದು ಮೋಸ ಮಾಡಿರುತ್ತಾನೆ.
ಕಾರವಾರದಲ್ಲಿ ಹಲವರಿಗೆ ಮೋಸ ಮಾಡಿದ್ದಲ್ಲದೇ ಕೊಪ್ಪಳ, ಮಂಗಳೂರು, ಉಡುಪಿ, ಮೈಸೂರು, ಹಾವೇರಿ, ಶಿವಮೊಗ್ಗಗಳಲ್ಲಿ ಸಹ ಜನರಿಗೆ ಸೈಟ್, ಡಿಸ್ಟ್ರಿಬ್ಯೂಷನ್ ಕೊಡಿಸುವುದಾಗಿ ಹೇಳಿ ಮೋಸ ಮಾಡಿ ಪರಾರಿಯಾಗಿದ್ದ. ಈತ ಕಾರವಾರದಲ್ಲಿ ಹಲವರಿಂದ ದೋಚಿದ ಹಣವನ್ನು ಕೊಂಡೊಯ್ಯುತ್ತಿರುವ ವೇಳೆ ಕಾರವಾರ ನಗರದ ಪಿಎಸ್‍ಐ ಸಂತೋಷ್ ಕುಮಾರ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತನಿಂದ 5,95,000 ರೂ. ನಗದು, 13,00,000 ಮೌಲ್ಯದ 327 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ ದುಬಾರಿ ಫೋರ್ಡ್ ಕಾರ್ ವಶಕ್ಕೆ ಪಡೆಯಲಾಗಿದೆ.