ಕಾರವಾರ: ಅಂಕೋಲದ (Ankola) ವ್ಯಕ್ತಿಯೊಬ್ಬರು ಸೈನ್ಯ (Indian Army) ಸೇರಿ ದೇಶ ಸೇವೆ ಮಾಡಬೇಕು ಎಂಬ ಹಂಬಲ ಈಡೇರದಿದ್ದಿದ್ದಕ್ಕೆ, ತಾವು ಸಾಕಿದ್ದ ಶ್ವಾನದ ಸಂತತಿಯನ್ನೇ ದೇಶ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಇಲ್ಲಿಯವರೆಗೆ ಅವರು 30ಕ್ಕೂ ಹೆಚ್ಚು ಶ್ವಾನಗಳನ್ನು ದೇಶದ ಭದ್ರತೆಗಾಗಿ ನೀಡಿದ್ದಾರೆ. ಇದೀಗ ಎರಡು ಮರಿಗಳು ಸಿಆರ್‌ಪಿಎಫ್ (CRPF) ತುಕಡಿಗೆ ಸೇರಲು ಸಿದ್ಧವಾಗಿವೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಅಂಕೋಲ ತಾಲೂಕಿನ ಬಾವಿಕೇರಿಯ ರಾಘವೇಂದ್ರ ಭಟ್ ಅವರಿಗೆ ಸೇನೆಗೆ ಸೇರಬೇಕೆಂಬ ಬಯಕೆ ಇತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಅದಕ್ಕಾಗಿಯೇ ಅವರು ಸಾಕಿದ್ದ ನಾಯಿಗಳನ್ನೇ ಕಳೆದ ಹಲವು ವರ್ಷಗಳಿಂದ ಸೇನೆ ಹಾಗೂ ಪೊಲೀಸ್ ಇಲಾಖೆಗೆ ಒಪ್ಪಿಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 30ಕ್ಕೂ ಹೆಚ್ಚು ಶ್ವಾನಗಳನ್ನು ಅವರು ದೇಶದ ಭದ್ರತೆಗೆ ಒಪ್ಪಿಸಿದ್ದಾರೆ.
ಹವ್ಯಾಸಕ್ಕಾಗಿ ಕಳೆದ 25 ವರ್ಷಗಳಿಂದ ಹಲವು ತಳಿಯ ಶ್ವಾನಗಳನ್ನು ಸಾಕುತ್ತಾ ಬಂದಿದ್ದಾರೆ. ಈಗ ಇವರ ಬಳಿ ಬೆಲ್ಝಿಯಂ ಮೆಲಿನೋಯ್ಸ್ ತಳಿಯ ಐದು ಶ್ವಾನಗಳಿದ್ದು, ಇವುಗಳಲ್ಲಿ ಮೂರು ಹೆಣ್ಣು ,ಎರಡು ಗಂಡುಗಳಿವೆ. ಇವುಗಳ ಮರಿಗಳೆಲ್ಲವೂ ದೇಶಸೇವೆಗೆ ಮುಡಿಪಾಗಿಡಲಾಗಿದೆ. ಲೀಸಾ ಶ್ವಾನದ ಎರಡು ಮರಿಗಳನ್ನು ಬೆಂಗಳೂರಿನ ಸಿಆರ್‌ಪಿಎಫ್‌ನ ಡಾಗ್ ಬ್ರೀಡ್ ಸೆಂಟರ್‌ಗೆ ಕರೆದೊಯ್ಯಲಾಗುತ್ತಿದೆ. ಇಲ್ಲಿ ಒಂದು ವರ್ಷಗಳ ತರಬೇತಿ ನೀಡಿದ ನಂತರ ಮಾದಕ ವಸ್ತು ಪತ್ತೆ, ಬಾಂಬ್ ಪತ್ತೆ ಕಾರ್ಯಕ್ಕೆ ಇವುಗಳ ನಿಯೋಜನೆಯಾಗಲಿವೆ. ನಕ್ಸಲ್ ನಿಗ್ರಹ ಪಡೆಯಲ್ಲಿ ಈ ಶ್ವಾನದ ಮರಿಗಳು ಕಾರ್ಯ ನಿರ್ವಹಿಸಲಿದೆ.
ವರ ಮನೆಯಲ್ಲಿ ಸಾಕಿರುವ ಬೆಲ್ಝಿಯಂ ಮೆಲಿನೋಯ್ಸ್ ತಳಿಯ ಶ್ವಾನಗಳ ವಿಶೇಷವೇನು ಗೊತ್ತಾ? ಇವುಗಳಿಗೆ ಚಿರತೆಯ ವೇಗ, ಹದ್ದಿನ ಕಣ್ಣು, ಚಾಣಾಕ್ಷ ಬುದ್ಧಿ, ಎಂಟೆದೆ ಬಂಟನಂತ ದೈರ್ಯ! ಇವು ನೋಟದಲ್ಲೇ ಶತ್ರುಗಳ ಹುಟ್ಟಡಗಿಸುವ ಶಕ್ತಿ ಹೊಂದಿವೆ. ಮೊದಲ ಬಾರಿಗೆ ತಾವು ಸಾಕಿದ್ದ ಲೀಸಾ ಮತ್ತು ಟೈನಿ ಎಂಬ ಎರಡು ಶ್ವಾನಗಳ ಸಂಪೂರ್ಣ ಸಂತತಿಯನ್ನ ದೇಶ ಮತ್ತು ರಾಜ್ಯದ ಸೇವೆಗೆ ಮುಡಿಪಾಗಿರಿಸಿದ್ದಾರೆ. ಮೊದಲ ಬಾರಿ ಹುಟ್ಟಿದ ಟೈನಿ ಶ್ವಾನದ -8 ಲೀಸಾ ಶ್ವಾನದ 9 ಮರಿಗಳನ್ನು ಆರ್ಮಿಗಳಿಗೆ ಒಪ್ಪಿಸಿದ್ದಾರೆ. ಇದರ ಜೊತೆಗೆ 6 ವರ್ಷಗಳಲ್ಲಿ ಹುಟ್ಟಿದ 15 ಮರಿಗಳನ್ನು ರಾಜ್ಯದ ಪೊಲೀಸ್ ಇಲಾಖೆಗೆ ನೀಡಿದ್ದಾರೆ.
ಅಸ್ಸಾಂ ರೈಫಲ್ ತುಕಡಿಯಲ್ಲಿ ಇವರು ನೀಡಿದ 16 ಶ್ವಾನಗಳು ದೇಶ ಸೇವೆ ಮಾಡುತ್ತಿವೆ. ಬಾಂಬ್ ಪತ್ತೆಕಾರ್ಯ, ಮಾದಕ ವಸ್ತುಗಳ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇನ್ನೂ ರಾಜ್ಯ ಪೊಲೀಸ್ ಇಲಾಖೆಯ ಬೆಳಗಾವಿಯ ಬಾಂಬ್ ನಿಷ್ಕ್ರಿಯ ದಳದಲ್ಲಿರುವ ಇವರ ಮಾಯಾ ಎಂಬ ಶ್ವಾನವು ಎಕ್ಸ್ ಪೊಲೀಸಿವ್ ಟ್ರೇಡ್‌ನಲ್ಲಿ ಪ್ರಥಮ ಸ್ಥಾನಗಳಿಸಿದೆ. ಬೆಂಗಳೂರಿನ ವಿಮಾನ ನಿಲ್ದಾಣ, ರಾಜ್ಯದ ಬಾಂಬ್ ನಿಷ್ಕ್ರಿಯ ದಳದಲ್ಲಿ ಕರ್ತವ್ಯ ನಿರ್ವಹಿಸಿತ್ತಿವೆ.
ಲೀಸಾ ಶ್ವಾನವು ಈಗ ಮೂರು ಮರಿಗಳನ್ನು ಹಾಕಿದ್ದು ಪಹಲ್ಗಾವ್ ದಾಳಿಯ ನಂತರ ಮರಿಗಳನ್ನು ಸಿಆರ್‌ಪಿಎಫ್‌ಗೆ ನೀಡಬೇಕು ಎಂಬ ಹಂಬಲದಲ್ಲಿ ರಾಘವೇಂದ್ರ ಭಟ್, ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಉತ್ತಮ ಶ್ವಾನದ ಹುಡುಕಾಟದಲ್ಲಿದ್ದ ಸಿಆರ್‌ಪಿಎಫ್ ಅಧಿಕಾರಿಗಳು ತಕ್ಷಣ ಇವರ ಮನೆಗೆ ಆಗಮಿಸಿ ಮರಿಗಳನ್ನು ತಪಾಸಣೆ ಮಾಡಿದಾಗ ಉತ್ತಮ ಆರೋಗ್ಯ, ಚುರುಕುತನದಿಂದ ಕೂಡಿದ ಬಲಶಾಲಿಯಾದ ಬೆಲ್ಝಿಯಂ ಮೆಲಿನೋಯ್ಸ್‌ನ ಎರಡು ಮರಿಗಳು ಆಯ್ಕೆಯಾಗಿದ್ದು ಉಚಿತವಾಗಿ ದೇಶಸೇವೆಗಾಗಿ ಈ ಮರಿಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಸೈನ್ಯದ ಪ್ರತಿ ತುಕಡಿಗೆ 14 ಶ್ವಾನಗಳ ಅವಶ್ಯಕತೆ ಇರುತ್ತದೆ. ಇವುಗಳು ಯೋಧರ ಜೀವ ರಕ್ಷಣೆಯ ಹೊಣೆ ಹೊರುವ ಜೊತೆ ಬಾಂಬ್ ಪತ್ತೆ ಕಾರ್ಯ, ಮಾದಕ ವಸ್ತುಗಳ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.