ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಿರುವ ಬಹು ನಿರೀಕ್ಷಿತ ಟ್ಯುಪೊಲೆವ್-142 ಎಂ ಯುದ್ಧ ವಿಮಾನ ಮ್ಯೂಸಿಯಂ ಸ್ಥಾಪಿಸಲು ನೌಕಾನೆಲೆಯ ಕರ್ನಾಟಕ ಪ್ಲಾಗ್ ಆಫೀಸರ್ ಮಹೇಶ್‍ಸಿಂಗ್ ಹಾಗೂ ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ನಡುವೆ ಒಪ್ಪಂದಕ್ಕೆ ಸಹಿ ಹಾಕಿಕೊಳ್ಳಲಾಯಿತು.
ಟ್ಯುಪೊಲೆವ್ ಯುದ್ಧ ವಿಮಾನವನ್ನು ಕಾರವಾರದಲ್ಲಿ ಇರುವ ಐ.ಎನ್.ಎಸ್.ಚಾಪೆಲ್ ಯುದ್ಧ ನೌಕೆ ಮ್ಯೂಸಿಯಂ ಪಕ್ಕದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಹಿಂದೆಯೇ ಮ್ಯೂಸಿಯಂ ಸ್ಥಾಪನೆಗೆ ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕುರಿತು ಕೇಂದ್ರ ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದರು. ಆದರೆ ಅತೀ ವೆಚ್ಚ ಸೇರಿದಂತೆ ನಾನಾ ಕಾರಣಕ್ಕೆ ವಿಮಾನ ಮ್ಯೂಸಿಯಂ ಸ್ಥಾಪನೆ ಪ್ರಕ್ರಿಯೆಗೆ ತೊಡಕಾಗಿತ್ತು.
10 ಕೋಟಿ ವೆಚ್ಚ: ಚೆನ್ನೈನಿಂದ ವಿಮಾನದ ಬಿಡಿ ಭಾಗಗಳನ್ನು ನಗರಕ್ಕೆ ತಂದು, ನೌಕಾಪಡೆಯಿಂದಲೇ ಜೋಡಿಸಿ ಕೊಡುವ ಕಾರ್ಯ ಮಾಡಲಾಗುತ್ತದೆ. ಬಳಿಕ ಅದರಲ್ಲಿ ನೌಕಾಪಡೆಯ ಕಾರ್ಯಾಚರಣೆಗೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ಇಟ್ಟು ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲಾಗುತ್ತದೆ. ವಿಮಾನದ ಬಿಡಿ ಭಾಗವನ್ನು ಚನ್ನೈನಿಂದ ತರಲು 10 ಕೋಟಿ ರೂ. ವೆಚ್ಚ ತಗಲಿದೆ. ಈ ವೆಚ್ಚದಲ್ಲಿ ಅರ್ಧ ನೌಕಾದಳ ಇನ್ನರ್ಧ ರಾಜ್ಯ ಸರ್ಕಾರ ಭರಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ ಕಾರವಾರದಲ್ಲಿ ಕದಂಬ ನೌಕಾನೆಲೆ ಇರುವುದರಿಂದ ಹಾಗೂ ಸ್ಥಳೀಯರು ನೌಕಾನೆಲೆಗೆ ಸ್ಥಳ ನೀಡಿದ್ದರಿಂದ ಎಲ್ಲಾ ವೆಚ್ಚವನ್ನು ಭಾರತೀಯ ನೌಕಾದಳವೇ ಭರಿಸುತ್ತಿದೆ.
ಈ ವರ್ಷದ ಡಿಸೆಂಬರ್ ನಲ್ಲಿ ನಡೆಯಲಿರುವ ನೌಕಾ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರದ ಸಚಿವರನ್ನು, ನೌಕಾನೆಲೆಯ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ ಉದ್ಘಾಟಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಸದ್ಯ ಜಾಗವನ್ನು ನೀಡಿರುವ ಜಿಲ್ಲಾಡಳಿತ ನೌಕಾದಳದೊಂದಿಗೆ ಎರಡು ವರ್ಷದ ಒಪ್ಪಂದ ಮಾಡಿಕೊಂಡಿದ್ದು, ಒಂದು ವರ್ಷಕ್ಕೆ ಆರು ಲಕ್ಷ ನಿರ್ವಹಣಾ ವೆಚ್ಚ ತಗುಲಲಿದ್ದು ಬರುವ ಪ್ರವಾಸಿಗರ ಮೂಲಕ ಭರಿಸುವ ಯೋಜನೆ ರೂಪಿಸಲಾಗಿದೆ.
ಟ್ಯುಪೊಲೆವ್ ಯುದ್ಧ ವಿಮಾನದ ವಿಶೇಷತೆ:
ಟ್ಯುಪೊಲೆವ್ ಯುದ್ಧ ವಿಮಾನವು 29 ವರ್ಷಗಳ ಕಾಲ ಭಾರತೀಯ ನೌಕಾದಳದಲ್ಲಿ ಸೇವೆ ಸಲ್ಲಿಸಿದೆ. 30 ಸಾವಿರ ಗಂಟೆಗಳ ಕಾಲ ಅಪಘಾತ ರಹಿತ ಹಾರಾಟವನ್ನು ನಡೆಸಿದೆ. ಸೋವಿಯತ್ ಒಕ್ಕೂಟದ ಕಾಲದಲ್ಲಿ 1988 ರಲ್ಲಿ ಭಾರತ ಈ ಯುದ್ಧ ವಿಮಾನವನ್ನು ಖರೀದಿ ಮಾಡಿತ್ತು. ಒಮ್ಮೆ ಇಂಧನ ತುಂಬಿದರೆ 1,300 ಕಿಲೋ ಮೀಟರ್ ಸಾಗಬಲ್ಲ ಟ್ಯುಪೊಲೆವ್ ಯುದ್ಧ ವಿಮಾನ 11 ರಿಂದ 15 ಸೈನಿಕರನ್ನು ಕೂರಿಸಿಕೊಂಡು 711 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿತ್ತು. ಸುಮಾರು 1,500 ಮೀಟರ್ ಉದ್ದವಿರುವ ಟ್ಯುಪೊಲೆವ್ ಅನ್ನು ಭಾರತೀಯ ನೌಕಾಪಡೆಯು 2017ರ ಮಾರ್ಚ್ ನಲ್ಲಿ ಡಿ-ಕಮಿಷನ್ (ನಿವೃತ್ತಿ) ಮಾಡಿದೆ.