ಕಾರವಾರ: ಹನಿಟ್ರ್ಯಾಪ್ ಹಾಗೂ ಹಣದ ಅಮಿಷಕ್ಕೆ ಒಳಗಾಗಿ ಭಾರತೀಯ ನೌಕಾದಳದ ಹಡಗುಗಳ ಚಲನವಲನ ಹಾಗೂ ಆಂತರಿಕ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಗೆ ಮಾಹಿತಿ ನೀಡುತ್ತಿದ್ದ ಕಾರವಾರದ ಕದಂಬ ನೌಕಾನೆಲೆಯ ರಾಜಸ್ಥಾನ, ಒಡಿಶಾ ಮೂಲದ ಇಬ್ಬರು ಸೈಲರ್ ಸಿಬ್ಬಂದಿ ಸೇರಿದಂತೆ ಎಂಟು ಜನರನ್ನು ಆಂಧ್ರದ ಸಿ.ಐ ಸೆಲ್ ಪೊಲೀಸರು ಇಂದು ಬಂಧಿಸಿದ್ದಾರೆ.
ಆಂಧ್ರದ ಸಿ.ಐ ಸೆಲ್ ಪೊಲೀಸರು ಕಾರವಾರದ ಅರಗಾದ ಕದಂಬ ನೌಕಾನೆಲೆ, ಮುಂಬೈ, ವಿಶಾಖಪಟ್ಟಣದಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿ ಬಂಧಿಸಿದ್ದಾರೆ. ಕಾರವಾರದ ಕದಂಬ ನೌಕಾನೆಲೆಯ ಇಬ್ಬರು, ವಿಶಾಖಪಟ್ಟಣದ ಮೂವರು, ಮುಂಬೈನ ಭೂಗತ ಲೋಕದ ನಂಟು ಹೊಂದಿರುವ ಹವಾಲ ಹಣ ವ್ಯವಹಾರದ ವ್ಯಕ್ತಿ ಸೇರಿ ಮೂವರು ಒಟ್ಟು ಎಂಟು ಜನರನ್ನು ರಾತ್ರೋರಾತ್ರಿ ವಶಕ್ಕೆ ಪಡೆದು ಬಂದಿಸಿದ್ದಾರೆ.
Advertisement
Advertisement
ಬಂಧಿತರಿಂದ ಮೊಬೈಲ್, ಅಂತರಾಷ್ಟ್ರೀಯ ಬ್ಯಾಂಕ್ ವ್ಯವಹಾರ ಮಾಡಿದ ದಾಖಲೆ, ನೌಕಾನೆಲೆಯ ಆಂತರಿಕ ಸಿಗ್ನಲ್ ಮ್ಯಾಪ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಗಳಿಗೆ ಕಾರವಾರ ಸೇರಿದಂತೆ ದೇಶದ ಪ್ರಮುಖ ನೌಕೆಗಳ ಚಲನವಲನದ ಬಗ್ಗೆ ಹಾಗೂ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡುತಿದ್ದರು. ಇದಲ್ಲದೇ ಇವರೊಂದಿಗೆ ಹಲವು ಅಧಿಕಾರಿಗಳು ಹನಿಟ್ರ್ಯಾಪ್ ಆಗಿರುವ ಬಗ್ಗೆ ಆಂಧ್ರದ ಗುಪ್ತದಳ ಮಾಹಿತಿ ಪಡೆದಿದ್ದು, ಅವರನ್ನು ಬಂಧಿಸುವಲ್ಲಿ ಕಾರ್ಯೋನ್ಮುಕವಾಗಿದೆ. ಘಟನೆ ಸಂಬಂಧ ಆಂಧ್ರ ಪ್ರದೇಶದ ವಿಜಯವಾಡ ಇಂಟಲಿಜನ್ಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಸಿಕ್ಕಿದ್ದು ಹೇಗೆ?
ಆಂಧ್ರದ ಸಿ.ಐ ಸೆಲ್ ನ ಅಧಿಕಾರಿಗಳಿಗೆ ಮುಂಬೈನಲ್ಲಿರುವ ಹವಾಲ ಹಣ ವ್ಯವಹಾರ ಮಾಡುತಿದ್ದ ಭೂಗತ ಲೋಕದ ನಂಟು ಹೊಂದಿದ್ದ ವ್ಯಕ್ತಿಯನ್ನು ಆಂಧ್ರದ ವಿಜಯವಾಡದಲ್ಲಿ ಬಂಧಿಸಲಾಗಿತ್ತು. ಈತನನ್ನು ತನಿಖೆ ನಡೆಸಿದಾಗ ಹವಾಲ ಹಣ ಬಳಸಿ ಹಾಗೂ ಹನಿಟ್ರ್ಯಾಪ್ ಮಾಡುವ ಮೂಲಕ ಕಾರವಾರದ ಕದಂಬ ನೌಕಾನೆಲೆ, ವಿಶಾಖಪಟ್ಟಣ, ಮುಂಬೈ ನೌಕಾನೆಲೆಯ ನೌಕೆಯ ಸೈಲರ್ ಗಳ ಮೂಲಕ ಕಾರವಾರದ ಕದಂಬ ನೌಕಾನೆಲೆ, ವಿಶಾಖಪಟ್ಟಣಮ್, ಮುಂಬೈ ನೌಕಾನೆಯಲ್ಲಿ ಯುದ್ಧ ಹಡಗುಗಳ ಚಲನವಲನ, ಮ್ಯಾಪ್ ಗಳು, ಸಿಗ್ನಲ್ ಗಳ ಬಗ್ಗೆ ಮಾಹಿತಿ ಪಡೆಯಲಾಗುತಿತ್ತು. ಈ ಕುರಿತು ಮಾಹಿತಿಯನ್ನು ಆತ ಬಾಯಿ ಬಿಟ್ಟಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಆಂಧ್ರ ಸಿ.ಐ ಸೆಲ್ ಅಧಿಕಾರಿಗಳು ಆತನ ಫೋನ್ ಸೇರಿದಂತೆ ಬ್ಯಾಂಕ್ ವ್ಯವಹಾರದ ದಾಖಲೆ ಪರಿಶೀಲಿಸಿದ್ದು ಈ ವೇಳೆ ವಿಷಯ ಹೊರಬಂದಿದೆ. ನಂತರ ಏಕ ಕಾಲದಲ್ಲಿ ದಾಳಿ ನಡೆಸಿ ಇಂದು ಏಳು ಜನ ನೌಕಾದಳದ ಸೈಲರ್ ಸಿಬ್ಬಂದಿಗಳನ್ನು ವಶಕ್ಕೆ ಪಡೆಯಲಾಗಿದೆ.
ಗೋವಾದಲ್ಲಿ ಹನಿಟ್ರ್ಯಾಪ್!
ಕಾರವಾರ, ಮುಂಬೈನ ನಾವಿಕರಿಗೆ ಹೆಣ್ಣಿನ ಆಸೆ ತೋರಿಸಿ ಪಾಕಿಸ್ತಾನದ ಗುಪ್ತದಳ ಸಂಸ್ಥೆ ಗೋವಾದ ಪ್ರತಿಷ್ಠಿತ ಹೋಟಲ್ ನಲ್ಲಿ ರೂಮ್ ಬುಕ್ ಮಾಡುವ ಮೂಲಕ ಹನಿಟ್ರ್ಯಾಪ್ ಮಾಡಿದೆ. ಇದಲ್ಲದೇ ಬಂಧಿತರಿಗೆ ಹಣ ಕೂಡ ನೀಡಲಾಗಿದ್ದು ಅವರ ಖಾತೆಗಳಿಗೆ ಅಂತರಾಷ್ಟ್ರೀಯ ಬ್ಯಾಂಕ್ ವ್ಯವಹಾರದ ದಾಖಲೆ ಸಹ ಸಿಕ್ಕಿದೆ. ಈ ಹನಿಟ್ರ್ಯಾಪ್ ಗೆ ಕೇವಲ ನೌಕೆಯ ಸೈಲರ್ ಗಳಲ್ಲದೇ ನೌಕಾ ನೆಲೆಯ ಪ್ರಮುಖ ಹುದ್ದೆಯಲ್ಲಿರುವ ದೆಹಲಿ ಸೇರಿದಂತೆ ಪ್ರಮುಖ ನೌಕಾ ಕಚೇರಿಯ ಅಧಿಕಾರಿಗಳು ಸಹ ಒಳಗಾಗಿರುವ ಕುರಿತು ತನಿಖೆ ನಡೆಸಲಾಗುತ್ತಿದ್ದು ವಿಚಾರಣೆ ಮುಂದುವರಿದಿದೆ.