ಪತ್ನಿ, ಮಕ್ಕಳಿಗೆ ಚಿಕನ್ ತಯಾರಿಸಿ ಉಣಬಡಿಸಿದ ಕಾರವಾರ ಶಾಸಕ ಸತೀಶ್ ಸೈಲ್

Public TV
3 Min Read
KWR RELAX

ಕಾರವಾರ: ಒಂದೆಡೆ ಅಬ್ಬರದ ಪ್ರಚಾರ, ಸದಾ ತುಂಬಿ ತುಳುಕುತಿದ್ದ ಜನರ ಸಂತೆ, ಟೀಕೆ ಟಿಪ್ಪಣಿಗಳ ನಡುವೆ ತಾನು ಗೆಲ್ಲಬೇಕೆಂಬ ಹಂಬಲದಲ್ಲಿ ವಿಧಾನಸಭಾ ಚುನಾವಣೆಯ ರಂಗಿನ ರಣರಂಗದಲ್ಲಿ ಸದಾ ಬಿಸಿಯಾಗಿದ್ದ ಪ್ರತಿಷ್ಠಿತ ಕಣವಾದ ಕಾರವಾರ ವಿಧಾನಸಭಾ ಕ್ಷೇತ್ರದ ಮೂರು ಪಕ್ಷದ ನಾಯಕರು ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.

ಸದಾ ಜನರ ಮಧ್ಯೆ ಇರುವ ನಾಯಕರು ತಮ್ಮ ವೈಯಕ್ತಿಕ ಬದುಕಿಗೆ ಸಮಯ ಕೊಟ್ಟದ್ದು ಅಲ್ಪ ಸಮಯ. ಇದೇ ತಿಂಗಳ 15 ರಂದು ಫಲಿತಾಂಶದ ನಿರೀಕ್ಷೆಯಲ್ಲಿರುವ ಈ ನಾಯಕರು ಇಂದು ತಮ್ಮ ಒತ್ತಡವನ್ನು ಕಮ್ಮಿ ಮಾಡಿಕೊಳ್ಳಲು ಅಡುಗೆ ಮಾಡಿ ಕುಟುಂಬವರಿಗೆ ಬಡಿಸಿದ್ದಾರೆ.

ಕಳೆದ ಎರಡು ತಿಂಗಳ ಚುನಾವಣಾ ಕುರುಕ್ಷೇತ್ರಕ್ಕೆ ಪೂರ್ಣ ವಿರಾಮ ಬಿದ್ದಿದೆ. ಇನ್ನು 15ನೇ ದಿನಾಂಕದಂದು ಜನರ ನಿರ್ಧಾರದ ಫಲಿತಾಂಶ ಬರಬೇಕಿದೆ. ತಾವು ಪಟ್ಟ ಶ್ರಮದ ನಿರೀಕ್ಷೆಯಲ್ಲಿ ನಾಯಕರು ಒತ್ತಡದಲ್ಲಿ ಇರೋದು ಸಹಜವಾಗಿದೆ. ತ್ರಿಕೋನ ಸ್ಪರ್ಧೆ ಇರುವ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಪಕ್ಷೇತರ ಶಾಸಕ ಸತೀಶ್ ಸೈಲ್, ಜೆಡಿಎಸ್ ನಿಂದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮತ್ತು ಬಿಜೆಪಿಯಿಂದ ರೂಪಾಲಿ ನಾಯ್ಕ ಸ್ಪರ್ಧಿಸಿದ್ದರು.

asnotikar 4

ಸದ್ಯ ಇಂದು ಮತ್ತು ನಾಳೆ ಮನಸ್ಸಿನಲ್ಲಿ ಅಳುಕು ಮತ್ತು ಒತ್ತಡ ಇದ್ದರು ಮೂವರು ಅಭ್ಯರ್ಥಿಗಳು ಈ ಒತ್ತಡ ಮರೆಯಲು ಹರಸಾಹಸ ಪಡುತಿದ್ದಾರೆ. ಕಳೆದ ಎರಡು ತಿಂಗಳಿಂದ ಕ್ಷೇತ್ರ ಸುತ್ತಿ ಪ್ರಚಾರ ನಡೆಸಿ ದಣಿದಿರುವ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಗೋವಾಕ್ಕೆ ತೆರಳಿ ರಿಲ್ಯಾಕ್ಸ್ ಮಾಡುತ್ತಿದ್ದು, ಅವರ ಅಧಿಕೃತ ನಿವಾಸ ಜನರಿಲ್ಲದೇ ಬಿಕೋ ಎನ್ನುತಿತ್ತು. ಒತ್ತಡ ಮರೆಯಲು ಜನರಿಂದ ದೂರ ವಿರಲು ಬಯಸಿರುವ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಕಾರವಾರದ ಸೋನಾರವಾಡದಲ್ಲಿರುವ ಮನೆಯ ಮುಂಭಾಗಕ್ಕೆ ಬೀಗ ಹಾಕಿ ಒಳ ಸೇರಿದ್ದಾರೆ. ಮನೆಯ ಬಳಿ ಬಂದ ಜನರ ಸಂಪರ್ಕಕ್ಕೆ ಸಿಗಲಿಲ್ಲ.

ಇನ್ನು ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಹಾಲಿ ಪಕ್ಷೇತರ ಶಾಸಕ ಸತೀಶ್ ಸೈಲ್ ರವರ ಮಾಜಾಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಮನೆ ಕೂಡ ಯಾವುದೇ ಕಾರ್ಯಕರ್ತರ ಸದ್ದಿಲ್ಲದೇ ತಟಸ್ಥವಾಗಿತ್ತು. ಶಾಂತವಾಗಿದ್ದ ಮನೆಯಲ್ಲಿ ಸತೀಶ್ ಸೈಲ್ ಪತ್ನಿ ಕಲ್ಪನಾರೊಂದಿಗೆ ಅಡುಗೆ ಮನೆ ಸೇರಿ ಮಧ್ಯಾಹ್ನದ ಊಟಕ್ಕಾಗಿ ಚಿಕನ್ ತಯಾರಿಸಿದ್ದಾರೆ. ಅವರ ಕುಷಲೋಪರಿ ವಿಚಾರಿಸಲು ಬಂದವರಿಗೆ ತಮ್ಮ ಕೈಯಾರೆ ಟೀ ಮಾಡಿ ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ರಾಜಕೀಯ ಕ್ಷೇತ್ರಕ್ಕೆ ಬಂದಾಗಿನಿಂದ ಸಂಸಾರಕ್ಕೆ ಹೆಚ್ಚು ಸಮಯ ಕೊಡಲಾಗುತಿಲ್ಲ. ಮಕ್ಕಳೊಂದಿಗೆ ಬೆರೆಯದೇ ಎಷ್ಟೂ ದಿನಗಳಾಗಿವೆ. ಒಂದು ದಿನವಾದರೂ ನನ್ನ ಒತ್ತಡ ಮರೆತು ಮಕ್ಕಳು ಸಂಸಾರದೊಂದಿಗೆ ಬೆರೆಯಬೇಕೆಂದು ತೀರ್ಮಾನಿಸಿ ಜಂಜಾಟದಿಂದ ರಿಲಾಕ್ಸ್ ಮಾಡುತ್ತಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Sail 3

ನನ್ನ ತಂದೆ ಕ್ಯಾನ್ಸರ್ ನಿಂದ ತೀರಿಕೊಂಡರು. ಆಗ ಅವರಿಗೆ ಕ್ಯಾನ್ಸರ್ ಇದೇ ಎಂದು ತಿಳಿದುಕೊಳ್ಳವ ವೇಳೆ ಅವರು ನಮ್ಮನ್ನು ಅಗಲಿದ್ದರು. ಕಾರವಾರ ಕ್ಷೇತ್ರದಲ್ಲಿ ಕೈಗಾ ಅಣು ಸ್ಥಾವರ, ಆದಿತ್ಯ ಬಿರ್ಲಾ ಕೆಮಿಕಲ್ ಕಾರ್ಖಾನೆಗಳಿವೆ. ಇವುಗಳಿಂದ ಸಾಕಷ್ಟು ಜನರಿಗೆ ಕ್ಯಾನ್ಸರ್ ನಂತಹ ರೋಗಗಳು ಬಂದಿವೆ. ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆ ವ್ಯವಸ್ಥೆ ಸರಿಯಾಗಿ ಇಲ್ಲ. ನನ್ನ ಅವಧಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಮಾಡಿಸುವ ಪ್ರಯತ್ನ ಮಾಡಿದ್ದೇನೆ. ಈಗ ಅದು ಸಫಲವಾಗಿದೆ ಎಂದು ತಮ್ಮ ತಂದೆಯನ್ನು ನೆನೆದು ಭಾವುಕರಾದ್ರು.

ನನ್ನ ಕ್ಷೇತ್ರದ ಜನರಿಗೆ ಉದ್ಯೋಗ ಇಲ್ಲಿಯೇ ಸಿಗುವಂತೆ ಮಾಡಬೇಕು. ಅದಕ್ಕಾಗಿ ಈ ಬಾರಿ ಚುನಾವಣಾ ಕಣದಲ್ಲಿದ್ದೇನೆ. ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವೆ ಎಂದು ನಾಲ್ಕು ವರ್ಷದ ತಮ್ಮ ಸಾಧನೆಯ ಬಗ್ಗೆ ಮನದ ಮಾತು ಹಂಚಿಕೊಂಡ್ರು. ಕಾರವಾರ ಕ್ಷೇತ್ರದ ಮೂರು ಪಕ್ಷದ ಅಭ್ಯರ್ಥಿಗಳು ಇಂದು ಜನರ, ಕಾರ್ಯಕರ್ತರ ಜಂಜಾಟದಿಂದ ದೂರ ಉಳಿದು ತಮ್ಮ ದಣಿವನ್ನು ನೀಗಿಸಿಕೊಂಡಿದ್ದು, 15ರ ಅಗ್ನಿ ಪರೀಕ್ಷೆಗೆ ರಿಫ್ರೆಶ್ ಆಗುತ್ತಿದ್ದಾರೆ.

roopali naik home

Share This Article