ಕಾರವಾರ: ಲೋಕಸಭಾ ಚುನಾವಣೆ ಮತದಾನ ಮುಗಿದಿದ್ದರೂ ಯುವಕನೊಬ್ಬ ಕಾಂಗ್ರೆಸ್‍ಗೆ ಮತ ಹಾಕಿ ಎಂದು ಕೇಳುತ್ತಲೇ ಪ್ರಾಣ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಇಲ್ಲಿನ ಹರಿದೇವನಗರದ ರಮೇಶ್ (32) ಮೃತ ದುರ್ದೈವಿ. ಹೂವಿನ ವ್ಯಾಪಾರಿಯಾಗಿರುವ ರಮೇಶ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ. ಮದ್ಯ ಸೇವಿಸಿ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ಮದ್ಯದ ಅಮಲಿನಲ್ಲಿದ್ದ ರಮೇಶ್ ನಗರದ ಬಾಂಡಿಶಿಟ್ಟಾದಲ್ಲಿ ಕಾಂಗ್ರೆಸ್‍ಗೆ ಮತ ಹಾಕಿ ಎಂದು ಕೂಗಾಡಿದ್ದ. ಬಳಿಕ ತನ್ನ ಸ್ಕೂಟಿ ಹತ್ತಿ ರಸ್ತೆಯಲ್ಲಿ ಮನಬಂದಂತೆ ಚಾಲನೆ ಮಾಡಿದ್ದ. ಇನ್ನೇನೂ ಮನೆಯ ಕಡೆಗೆ ಹೊರಟಿದ್ದ ರಮೇಶ್ ಸ್ಕೂಟಿಯನ್ನು ವೇಗವಾಗಿ ಚಾಲನೆ ಮಾಡಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಅತಿಯಾದ ರಕ್ತಸ್ರಾವದಿಂದ ರಮೇಶ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.