ಕಾರವಾರ: ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕೆಎಸ್‍ಆರ್‌ಟಿಸಿ ಬಸ್ (KSRTC Bus) ಡಿಕ್ಕಿಯಾಗಿ (Accident) ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಲ್ಲಾಪುರದ ಮಾವಳ್ಳಿ ಕ್ರಾಸ್ ಬಳಿ ಶುಕ್ರವಾರ (ಆ.15) ಮಧ್ಯರಾತ್ರಿ ನಡೆದಿದೆ. ಅಪಘಾತದಲ್ಲಿ 7 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಬಾಗಲಕೋಟೆ (Bagalkote) ಮೂಲದ ನಿಲವ್ವ ಹರದೊಳ್ಳಿ (40), ಜಾಲಿಹಾಳ ಗ್ರಾಮದ ಗಿರಿಜವ್ವಾ ಬೂದನ್ನವರ (30) ಎಂದು ಗುರುತಿಸಲಾಗಿದೆ. ಮತ್ತೊಬ್ಬ 45 ವರ್ಷದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. 7 ಹಾಗೂ 12 ವರ್ಷದ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಬಸ್ ಡಿಕ್ಕಿ – 10 ಮಂದಿ ಯಾತ್ರಿಕರು ಸಾವು
ಬಾಗಲಕೋಟೆಯಿಂದ ಮಂಗಳೂರು ಕಡೆ ಹೊಗುತ್ತಿದ್ದ ಬಸ್, ಮಾವಳ್ಳಿ ಕ್ರಾಸ್ ಬಳಿ ಇಂಡಿಕೇಟರ್ ಹಾಕದೇ ನಿಲ್ಲಿಸಿದ್ದ ಕೇರಳ ಮೂಲದ ಲಾರಿಗೆ ಡಿಕ್ಕಿಯಾಗಿದೆ. ವೇಗವಾಗಿ ಗುದ್ದಿದ ಪರಿಣಾಮ ಬಸ್ ಒಂದು ಬದಿ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇನ್ನೂ ಓವರ್‌ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ಮೃತರು ಕೆಲಸದ ನಿಮಿತ್ತ ಬಾಗಲಕೊಟೆಯಿಂದ ಮಂಗಳೂರು ಕಡೆಗೆ ಹೊರಟಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಬಸ್ ಚಾಲಕ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಯಲ್ಲಾಪುರ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಬಸ್ ಚಾಲಕ ಯಮನಪ್ಪ ಮಾಗಿ ಮೇಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹುಮಾಯೂನ್ ಸಮಾಧಿ ಬಳಿಯ ಮಸೀದಿಯ ಮೇಲ್ಛಾವಣಿ ಕುಸಿದು ಐವರು ಸಾವು